ಹೀಗೆ ಪೊಲೀಸ್ ಸ್ಟೇಷನಿನಲ್ಲಿ ಕೂತವರು ಮಧ್ಯಾಹ್ನವೋ ಸಂಜೆಯೋ ಹಿಂತಿರುಗಿ ಬರುತ್ತಿದ್ದೆವು. ಒಂದೆರಡು ಸಲ ಪೋಲೀಸ್ ಸ್ಟೇಷನ್ನಿನಲ್ಲೇ ಊಟವೂ ಸಿಕ್ಕಿತ್ತು.
ಮುಂದಕ್ಕೆ ಅನುಕಂಪ ಪಡೆಯುವುದಕ್ಕಾಗಿ ಮಹಿಳೆಯರನ್ನೂ ಜತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೆವು. ಪೊಲೀಸರಿಗೆ ಇಕ್ಕಟ್ಟಿನ ಸ್ಥಿತಿ; ಇವರನ್ನು ಬಂಧಿಸುವುದಾದರೂ ಹೇಗೆ ಅನ್ನುವುದೇ ಸಮಸ್ಯೆ. ನೇರವಾಗಿ ಸ್ಟೇಷನ್ನಿಗೆ ತಂದರೂ ಅವರನ್ನು ಇಟ್ಟುಕೊಳ್ಳುವ ಹಾಗೂ ಇಲ್ಲ, ಬಿಡುವ ಹಾಗೂ ಇಲ್ಲ. ಮುಂದಿನ ದಿನಗಳಲ್ಲಿ ಏನೇನೋ ಅವರನ್ನು ಪುಸಲಾಯಿಸಿ ಅವರ ಭಾಗವಹಿಸುವ ಸಂಖ್ಯೆಯನ್ನು ಕಡಿಮೆ ಮಾಡಿದರು.

ಮುಂದಿನ ದಿನಗಳಲ್ಲಿ ಮಂದುವರಿಯುತ್ತಾ ಇದ್ದಂತೆ, ನಮ್ಮನ್ನೆಲ್ಲಾ ಅಲ್ಲೇ ಇರುವ ಸೆಲ್ಲಿನೊಳಗೆ ತಳ್ಳಿ, ರಾತ್ರೆ ಒಂದು ಗಂಟೆಗೆಲ್ಲ ಬಿಡುವುದರ ಮೂಲಕ ಶಿಕ್ಷೆಯ ರುಚಿ ಹತ್ತಿಸಲು ಆರಂಭಿಸಿದರು. ಸಮಸ್ಯೆ ಎಂದರೆ ಆ ಮಧ್ಯರಾತ್ರಿಯಲ್ಲಿ ವಾಹನಗಳು ಸಿಗುವುದಾದರೂ ಹೇಗೆ ನೀವೇ ಹೇಳಿ! ಆಗ ಸುಬ್ರಹ್ಮಣ್ಯದ ಕಡೆಯಿಂದ ಬಿಳಿನೆಲೆ, ನೆಟ್ಟಣ, ಕೊಂಬಾರು ಮೊದಲಾದ ಕಡೆಗಳಿಂದ ರಾತ್ರೆ ಹೊತ್ತಲ್ಲಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದರು. ಅದು ಅಧಿಕೃತವೋ ಅನಧಿಕರತವೋ ಗೊತ್ತಿಲ್ಲ, ಲಾರಿಗಳನ್ನು ನಿಲ್ಲಿಸಿಯೋ ಮಾರ್ಗಕ್ಕೆ ಅಡ್ಡ ನಿಂತೋ ಅಂತೂ ಲಾರಿ ಹತ್ತಿ ಮನೆಗೆ ತಲುಪುತ್ತಿದ್ದೆವು.


ದೇಶಾದ್ಯಂತ ಜೈಲ್ ಭರೋ ಕಾರ್ಯಕ್ರಮದಿಂದಾಗಿ ಸೆರೆಮನೆಗಳೆಲ್ಲವೂ ತುಂಬಿತುಳುಕುತ್ತಿದ್ದ ಕಾರಣ, ಸರಕಾರ ಮುಂದಿನ ಹೆಜ್ಜೆಯಾಗಿ ದೇಶದ ಬೇರೆಬೇರೆ ಜೈಲುಗಳಿಗೆ ಇವರನ್ನು ಸಾಗಿಸಲು ಆರಂಭಿಸಿದರು, ಜತೆಯಲ್ಲಿ ಸಣ್ಣಪುಟ್ಟ ಶಿಕ್ಷೆಗಳೂ ಆರಂಭವಾದವು. ಕೆಲವು ಮಂದಿ ಹಿರಿಯ ನಾಯಕರನ್ನು ಹೇಳದೆ ಕೇಳದೆ ಬಂಧಿಸಿ ಎಲ್ಲೋ ಪರವೂರಿನಲ್ಲಿ ಬಂಧಿಗಳಾಗಿ ಇಡುತ್ತಿದ್ದರು; ನಮ್ಮಲ್ಲಿ ಕೆಲವರು ಈ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಹೆದರಿದ್ದಿದೆ, ನಾನೂ ಹೊರತಲ್ಲ ಬಿಡಿ, ನಾವು ಖೈದಿಗಳಾದರೆ ಮನೆಗಳ ಅವಸ್ಥೆ, ನಮ್ಮನ್ನೇ ನಂಬಿರುವವರ ಸ್ಥಿತಿ ಇವೆಲ್ಲವನ್ನೂ ಗಮನಿಸಿ ಯೋಚಿಸಬೇಕಾಯಿತು.
ಮುಂದಿನ ದಿನಗಳು ಸವಾಲಿನದ್ದೇ ಆಗಿತ್ತು. ಕಹಳೆ ಪತ್ರಿಕೆ ದೇಶಾದ್ಯಂತದ ವಿಷಯಗಳನ್ನು ದಿನನಿತ್ಯವೆನ್ನುವಂತೆ ಹೊತ್ತುತರುತ್ತಿತ್ತು. ಇದರ ಜತೆಯಲ್ಲಿ ಬಾಯಿಂದ ಬಾಯಿಗೆ ಕೆಲವು ಕುತೂಹಲಕರ ವಿಚಾರಗಳು ಹರಿದಾಡುತ್ತಿದ್ದವು; ದೇವತಾ ಮನುಷ್ಯ, ಗೋವಿನಂತಹ ಸ್ವಭಾವದ ಸಾತ್ವಿಕ ವ್ಯಕ್ತಿ ಉರಿಮಜಲು ರಾಮ ಭಟ್ಟರನ್ನು ಅರೆಸ್ಟ್ ಮಾಡಿದರಂತೆ, (ನಿಜ ಹೇಳಬೇಕೆಂದರೆ, ರಾಮ ಭಟ್ಟರು ಓರ್ವ ಅಜಾತ ಶತ್ರು, ಅವರನ್ನು ನೋಡುವಾಗಲೇ ಎಲ್ಲಿಲ್ಲದ ಭಕ್ತಿಭಾವ ಉಕ್ಕಿ ಬರುತ್ತಿತ್ತು ಅವರನ್ನು ಅರೆಸ್ಟ್ ಮಾಡುವ ಮೊದಲು ಪೊಲೀಸರು ತಲೆಯಿಂದ ಟೋಪಿಯನ್ನು ತೆಗೆದು ಭಟ್ಟರಿಗೆ ಗೌರವ ಸಲ್ಲಿಸಿ ಕಾರಿಗೆ ಹತ್ತಿಸಿದ್ದರಂತೆ, ಇದೊಂದು ದೊಡ್ಡ ವಿಚಾರವೇನಲ್ಲ ಯಾಕಂದ್ರೆ, ಅಂತಹ ಮೇರು ವ್ಯಕ್ತಿತ್ವ ಅವರದ್ದು; ಈಗಿನ ಭ್ರಷ್ಟ ರಾಜಕಾರಣಿಗಳಂತೆ ಅವರಿಗೆ ಯಾವತ್ತೂ ರಾಜಕೀಯ ಅನ್ನುವುದು ಪ್ರೊಫೆಷನ್ ಆಗಿರಲೇ ಇಲ್ಲ, ಅವರು ಕಳಕೊಂಡದ್ದೇ ಜಾಸ್ತಿ) ಮಗ ರವಿಗೆ ಎರೋ ಪ್ಲಾನ್ ಶಿಕ್ಷೆ ವಿಧಿಸಿದ್ದಾರಂತೆ, ಭೂಗತವಾಗಿದ್ದುಕೊಂಡೇ ಕಲ್ಲಡ್ಕ ಪ್ರಭಾಕರ ಭಟ್ಟರು ತಮ್ಮ ಮೂವರು ಸೊಸೆಯಂದಿರಿಗೆ ಮದುವೆ ಮಾಡಿದರಂತೆ, ಪುಟ್ಟಪ್ಪಯ್ಯ ಕಾರಂತರು ಅಡುಗೆ ಭಟ್ಟರ ವೇಷ ಹಾಕಿಕೊಂಡು ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ಭೂಗತ ಕೆಲಸಗಳಿಗೆ ತೊಡಗಿದ್ದರಂತೆ, ಹೀಗೆ ಕೆಲವು ಪ್ರೋತ್ಸಾಹದಾಯಕ, ನಿರಾಶಾದಾಯಕ, ಕುತೂಹಲಕರ, ಭಯದ ವಾತಾವರಣದ ವರ್ತಮಾನಗಳು ನಮ್ಮ ಕಿವಿಗೆ ಬೀಳುತ್ತಿತ್ತು. ಎಷ್ಟೋ ಮಂದಿ ಕಾರ್ಯಕರ್ತರು ಪೂರ್ಣಾವಧಿ ಮತ್ತು ಪ್ರತ್ಯಕ್ಷವಾಗಿ ಹಾಗೂ ಭೂಗತರಾಗಿ, ವೇಷ ಮರೆಸಿಕೊಂಡು ಸಂಘಟನೆಯಲ್ಲಿ ತೊಡಗಿದ್ದರು, ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರು. ವಿರೋಧಿಗಳು ಅಂದರೆ ತುರ್ತು ಪರಿಸ್ಥಿತಿಯನ್ನು ಬೆಂಬಲಿಸುವವರು ಉನ್ನತ ನಾಯಕರ ಬಂಧನವಾಗುವಲ್ಲಿ ವ್ಯೂಹ ರಚನೆ ಮಾಡುತ್ತಿದ್ದರು, ಇಲ್ಲಸಲ್ಲದ ಆರೋಪಗಳನ್ನು ಮಾಡಿ ಬಂಧನವಾಗುವಂತೆ ಪೊಲೀಸರನ್ನು ಛೂ ಬಿಡುತ್ತಿದ್ದರು.
ಮುಂದುವರಿಯುತ್ತದೆ…..
ರಾಜಮಣಿ ರಾಮಕುಂಜ.
