
ಹೀಗೆ ನಮ್ಮ ಸುತ್ತಮುತ್ತಲೇ ಹಲವಾರು ಮಂದಿ ಪ್ರತಿಭಟನಕಾರರ ಬಂಧನಕ್ಕೆ ವ್ಯೂಹ ರಚಿಸಲಾಗಿದೆ ಅನ್ನುವ ವರ್ತಮಾನಗಳು ಅಥವಾ ಗಾಳಿ ಸುದ್ದಿಗಳು ಅಲ್ಲಲ್ಲಿ ಹರಡುತ್ತಿದ್ದವು. ಈಗ ಪ್ರತಿಯೊಬ್ಬ ಪ್ರತಿಭಟನಾಕಾರರು ಕೂಡಾ ತಮ್ಮ ತಮ್ಮ ಹೆಗಲು ನೋಡಲು ಆರಂಭಿಸಿದರು, ಯಾರ ಬಂಧನ ಯಾವಾಗ ಎಲ್ಲಿ ಆಗುತ್ತದೆ ಅನ್ನುವ ಕುತೂಹಲವೋ ಅಥವಾ ಭಯ ಮಿಶ್ರಿತ ವಾತಾವರಣವೋ ಅಂತೂ ಎಲ್ಲಾ ಕಡೆಗಳಲ್ಲೂ ಪಿಸುಗುಟ್ಟುವಿಕೆ ಆರಂಭವಾಯಿತು. ಆದರೆ ಈ ಹೆಚ್ಚಿನ ಕಾಂಗ್ರೆಸಿರು ಹಾಗೂ ಕಮ್ಯುನಿಸ್ಟಿನವರು ಇದ್ದಾರಲ್ಲ ಅವರೆಲ್ಲ ಎದೆಯುಬ್ಬಿ ಹೆಮ್ಮೆಯಿಂದ ಠಳಾಯಿಸುತ್ತಿದ್ದರು. ತಮಗಾಗದವರು ಯಾರಾದರೂ ಇದ್ದರೆ ಒಂದು ತಳ್ಳಿ ಅರ್ಜಿ ಹಾಕಿ ಏನಾದರೂ ಮಾಡಿ ಬಂಧನ ಮಾಡಿಸಬಹುದಾಗಿತ್ತು. ಈಗಂತೂ ಎಲ್ಲರನ್ನೂ ಎಲ್ಲರೂ ಸಂಶಯದಿಂದಲೇ ನೋಡುವ ಪ್ರವೃತ್ತಿ ಆರಂಭವಾಯಿತು.
Advertisement ಈಗ ಕೇಂದ್ರ ಸರಕಾರ ಪ್ರತಿಭಟನಾಕಾರರ ಮೇಲೆ DIR(defence Indian rule)ನ್ನು ಜಾರಿ ಮಾಡಿ, ಆ ಕಾನೂನಿನ ಮೂಲಕ ಬಂಧನ ಸತ್ರ ಆರಂಭವಾಯಿತು. ಬಂಧನದಿಂದ ಯಾವಾಗ ಬಿಡುಗಡೆ ಹೊಂದುತ್ತಾರೆ ಅನ್ನುವ ಖಾತರಿ ಇಲ್ಲಿ ಇಲ್ಲ; ಆದರೆ ಎಲ್ಲಿ ಇಟ್ಟಿದ್ದಾರೆ ಹಾಗೂ ಬಂಧನದ ಉದ್ದೇಶ ಗೊತ್ತಾಗುತ್ತಿತ್ತು.
-

Advertisement 
Advertisement ಇದಕ್ಕೂ ಜಗ್ಗದಿದ್ದಾಗ ಹಾಗೂ ಜೈಲು ಪ್ರತಿಭಾಟನಾಕಾರರಿಂದ ತುಂಬಿತುಳುಕಿ ಇನ್ನು ಜಾಗವೇ ಇಲ್ಲ ಅಂದಾಗ ಲಾಠಿಪ್ರಹಾರದ ಮೂಲಕ ಪ್ರತಿಭಟನಾಕಾರರನ್ನು ಓಡಿಸುವ ಕಾರ್ಯ ಆರಂಭವಾಯಿತು.
ನಾನು ಆವತ್ತು ಉಪ್ಪಿನಂಗಡಿ ವೆಂಕಟರಮಣ ದೇವಳದ ಸಮೀಪವಿದ್ದ ಟೈಪರೈಟಿಂಗ್ ತರಗತಿಗೆ ಪೂರ್ವ ನಿರ್ಧಾರದಂತೆ ಒಂಭತ್ತು ಗಂಟೆಗೇನೇ ಬಂದಿದ್ದೆ. ಹತ್ತೂವರೆ ಗಂಟೆಗೆ ಹಳೆಯ ಬಸ್ಟ್ಯಾಂಡಲ್ಲಿ ಪ್ರತಿಭಟನೆಗಾಗಿ ಸೇರುವುದೆಂದು ನಿರ್ಧರಿಸಲಾಗಿತ್ತು, ಅಂದು ಉಪ್ಪಿನಂಗಡಿ ಸಂತೆ ಆಗಿರುವ ಕಾರಣದಿಂದಾಗಿ ಜನಸಂದಣಿ ಹೆಚ್ಚಾಗಿಯೇ ಇರುತ್ತಿತ್ತು. ಅಂದು ನಾನೂ ಕೂಡಾ ಭಾಷಣ ಮಾಡಬೇಕಾಗಿತ್ತು. ಸು.ಹನ್ನೊಂದು ಗಂಟೆ ಹೊತ್ತಿಗೆ ಮನವಳಿಕೆ ಕರಿಯಪ್ಪ ರೈ ಅವರ ಮಗ(ಉಮೇಶ ರೈ ಇರಬೇಕು)ಅವರ ನಾಯಕತ್ವದಲ್ಲಿ ಒಂದಷ್ಟು ಜನ ಒಟ್ಟು ಸೇರಿ ಭಾಷಣ, ಘೋಷಣೆ ಇತ್ಯಾದಿಗಳನ್ನು ಕೂಗುತ್ತಾ ಈಗಿರುವ ಬಸ್ ನಿಲ್ದಾಣದವರೆಗೆ ಮೆರವಣಿಗೆ ಬಂದಾಗ ಪೊಲೀಸರಿಂದ ಹಿಗ್ಗಾಮುಗ್ಗಾ ಲಾಠಿ ಪ್ರಹಾರ. ನೋವು ಸಹಿಸಲಾರದೆ ಕೆಲವರು ಓಡಲಾರಂಭಿಸಿದರು, ಇನ್ನು ಕೆಲವರು ಮತ್ತೆ ಮತ್ತೆ ಘೋಷಣೆ ಕೂಗತೊಡಗಿದರು. ಕಾವಲಿಯಲ್ಲಿ ದೋಸೆಯನ್ನು ಮಗುಚಿ ಮಗುಚಿ ಬೇಯಿಸುವ ಹಾಗೆ, ಬಿದ್ದುಕೊಂಡಿದ್ದ ನಮ್ಮನ್ನು ಮತ್ತೆಮತ್ತೆ ಎಬ್ಬಿಸಿ ಬೀಳಿಸಿ ಹೊಡೆಯುತ್ತಿದ್ದರು. ರಟ್ಟೆ ಹಾಗೂ ತೊಡೆಯ ಭಾಗದಲ್ಲಿ ರಕ್ತ ಒಸರುತ್ತಿತ್ತು. ಅಲ್ಲಿಂದ ನಮ್ಮನ್ನು ನೇತ್ರಾವತಿ ನದಿಯ ಸಂಕದ ಆಚೆ ಬದಿಗೆ ಇನ್ನು ತಿರುಗಿ ಬಾರದಂತೆ ಓಡಿಸಿದರು.
ಆ ಸಂದರ್ಭದಲ್ಲಿ ನೇತ್ರಾವತಿಯಲ್ಲಿ ಹೆಚ್ಚು ನೀರು ಇಲ್ಲದ್ದರಿಂದ ಕದ್ದುಮುಚ್ಚಿ ನೇತ್ರಾವತಿಯನ್ನು ಎದ್ದುಬಿದ್ದು ದಾಟಿ ಹಳೆಯ ಬಸ್ ನಿಲ್ದಾಣದಲ್ಲಿನ ಒಂದು ಕಟ್ಟಡದ ಮಾಳಿಗೆಯಲ್ಲಿದ್ದ ಡಾ| ಗೋಪಾಲಕೃಷ್ಣ ಭಟ್ ಅವರಲ್ಲಿಗೆ ಯಾರ ಕಣ್ಣಿಗೂ ಗೋಚರಿಸದೆ ಮರೆ ಮಾಡಿಕೊಂಡು ಹೋದೆವು; ಇಲ್ಲವಾದಲ್ಲಿ ನಮ್ಮ ಬೆಂಬಲಿಗರು ಅನ್ನುವ ನೆಲೆಯಿಂದ ಅವರನ್ನೂ ಬಂಧಿಸುವ ಸಾಧ್ಯತೆಯೂ ಇತ್ತು. ಆಗಿರುವ ಘಾಯಗಳು ಸೆಫ್ಟಿಕ್ ಆಗದಹಾಗೆ ಚುಚ್ಚು ಮದ್ದು ತಗೊಂಡು ಸಂಜೆಯ ಹೊತ್ತಿಗೆ ನಮ್ಮನಮ್ಮ ಮನೆಗಳಿಗೆ ತೆರಳಿದೆವು.
ಮುಂದುವರಿಯುತ್ತದೆ….
ರಾಜಮಣಿ ರಾಮಕುಂಜ.
Advertisement







