ಬಂಟ್ವಾಳ: ತಾಲೂಕಿನ ವಾಮದಪದವು ಹಾಗೂ ಚೆನ್ನೈತ್ತೋಡಿಯಲ್ಲಿರುವ ಶ್ರೀ ದೇವರಾಜ ಅರಸು ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿನಿಯರು ಕಳೆದ ಸೆ.5 ರಂದು ಕೃಷಿ ಕಲಿ -ನಲಿ ಕಾರ್ಯಕ್ರಮದ ಮೂಲಕ ಸ್ಥಳೀಯ ವಾಂಬೆಟ್ಟುವಿನ ಯಜ್ಞನಾರಾಯಣ ಎಂಬವರ ಅರ್ಧ ಎಕರೆ ವಿಸ್ತೀಣ್ದ ಗದ್ದೆಯಲ್ಲಿ ಭತ್ತದ ಸಾಗುವಳಿ ಮಾಡಿದ್ದರು. ವಿದ್ಯಾರ್ಥಿಗಳಿಗೆ ಭತ್ತದ ಬೇಸಾಯದ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವುದರ ಜೊತೆಗೆ ಅದರ ಪ್ರಾಯೋಗಿಕ ಅನುಭವವೂ ಆಗಬೇಕು ಎನ್ನುವ ಉದ್ದೇಶದಿಂದ ನಿಲಯದ ಮೇಲ್ವಿಚಾರಕಿ ಭವಾನಿ ಅವರ ಮುತುವರ್ಜಿಯಲ್ಲಿ, ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್ ಅವರ ಮಾರ್ಗದರ್ಶನದಂತೆ ಸ್ಥಳೀಯ ಕೃಷಿಕ ಯಜ್ಞ ನಾರಾಯಣ ಅವರ ಸಹಕಾರದೊಂದಿಗೆ ಕೃಷಿ ಚಟುವಟಿಕೆ ನಡಸಲಾಗಿತ್ತು. ಮೂರು ಹಾಸ್ಟೆಲ್ಗಳ 300 ಮಂದಿ ವಿದ್ಯಾರ್ಥಿಗಳು ಅಂದು ಈ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಬಳಿಕ ವಿದ್ಯಾರ್ಥಿಗಳೇ ಮೇಲುಸ್ತುವರಿ ವಹಿಸಿಕೊಂಡು ಗದ್ದೆಯ ನಿರ್ವಹಣೆ ನೋಡಿಕೊಳ್ಳುತ್ತಿದ್ದರು. ಇದೀಗ ಭತ್ತದ ಪೈರು ಕೊಯ್ಲಿಗೆ ಬಂದಿದ್ದು ಅದೇ ವಿದ್ಯಾರ್ಥಿಗಳು ಹಾಗೂ ಇಲಾಖಾ ಅಧಿಕಾರಿಗಳು ಭಾಗವಹಿಸಿ ಭಾನುವಾರ ಪೈರನ್ನು ಕಟಾವು ಮಾಡಿ, ತೆನೆಯನ್ನು ಬಡಿದು ಭತ್ತ ಸಂಗ್ರಹಿಸಿದ್ದಾರೆ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ಭೂದೇವಿಯೂ ಉತ್ತಮ ಫಸಲನ್ನು ನೀಡಿದ್ದು ಪರಿಶ್ರಮಕ್ಕೆ ಸಿಕ್ಕ ಪ್ರತಿಫಲಕ್ಕೆ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಮುಂಜಾನೆಯಿಂದ ಮಧ್ಯಾಹ್ನದವರೆಗೆ ಗದ್ದೆಯಲ್ಲಿ ಕೃಷಿ ಕಾರ್ಯ ಮಾಡಿ ಸಂಭ್ರಮಿಸಿದ್ದಾರೆ. ಪ್ರತಿದಿನ ನಾಲ್ಕು ಕೋಣೆಗಳ ಮಧ್ಯೆ ಪಾಠ ಪ್ರವಚನವನ್ನಿ ಕೇಳುವ ವಿದ್ಯಾರ್ಥಿಗಳಿಗೆ ನಿಲಯ ಮೇಲ್ವಿಚಾರಕಿ ಭವಾನಿ ಅವರ ಪ್ರಯತ್ನದಿಂದಾಗಿ ಬದುಕಿಗೆ ಅಗತ್ಯವಾಗಿರುವ ಕೃಷಿ ಪಾಠವೂ ಕರಗತವಾಗಿದೆ.