ಬಂಟ್ವಾಳ: ಗೌಡ ಸಾರಸ್ವತ ಬ್ರಾಹ್ಮಣ ವೃಂದದವರ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದ ಬ್ರಹ್ಮರಥೋತ್ಸವ ಕಾರ್ಯಕ್ರಮ ಸಹಿತ ಉತ್ಸವಾದಿ ಕಾರ್ಯಕ್ರಮಗಳು ಮಾರ್ಚ್ 12ರಿಂದ 17ರವರೆಗೆ ನಡೆಯಲಿದೆ. ಇದು ಬಂಟ್ವಾಳ ಬ್ರಹ್ಮರಥದ 200ನೇ ವರ್ಷಾಚರಣೆಯೂ ಆಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲಿವೆ ಎಂದು ಶ್ರೀ ದೇವಳದ ಆಡಳಿತ ಮೊತ್ತೇಸರರಾದ ಅಶೋಕ್ ಶೆಣೈ ಹೇಳಿದರು.
ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಕಾರ್ಯಕ್ರಮಗಳಿಗೆ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಮಾರ್ಚ್ 10ರಂದು ಆಗಮಿಸಿ 17ರವರೆಗೆ ಬಂಟ್ವಾಳದಲ್ಲಿ ಉಪಸ್ಥಿತರಿದ್ದು, ಶ್ರೀಗಳ ಆಜ್ಞಾನುಸಾರ ಕಾರ್ಯಕ್ರಮಗಳು ನಡೆಯಲಿವೆ, ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಎಲ್ಲ ಕಾರ್ಯಕ್ರಮಗಳಲ್ಲಿ ಸಹಭಾಗಿಗಳಾಗಿ ಶ್ರೀಹರಿಗುರುಕೃಪೆಗೆ ಪಾತ್ರರಾಗಬೇಕು ಎಂದವರು ವಿನಂತಿಸಿದರು.
ಸಮಾಜ ಬಾಂಧವರಿಂದ ಮಾರ್ಚ್ 10ರಂದು ಶ್ರೀದೇವರಿಗೆ ಮಲ್ಲಿಗೆ ಹೂವಿನಿಂದ ಸಹಸ್ರನಾಮ ಪುಷ್ಪಾಂಜನೆ, ಸಾಯಂಕಾಲ ವಿಶೇಷ ಹೊರೆಕಾಣಿಕೆ, ಸಮಾರಾಧನೆ ನಡೆಯಲಿದೆ. ಅಂದು ಬೆಳಗ್ಗೆ 11.30ಕ್ಕೆ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಬಂಟ್ವಾಳ ಮೊಕ್ಕಾಂಗೆ ಆಗಮಿಸುವವರು. ನಂತರ ಶ್ರೀದೇವರಿಗೆ ಮಹಾನೈವೇದ್ಯ ಪೂಜೆ, ಸಮಾರಾಧನೆ ಇರಲಿದೆ. ಸಂಜೆ 5.30ಕ್ಕೆ ಬಂಟ್ವಾಳ ಬಡ್ಡಕಟ್ಟೆ ಶ್ರೀ ಹನುಮಂತ ದೇವಸ್ಥಾನದ ಬಳಿಯಿಂದ ವಿಶೇಷ ಹೊರೆಕಾಣಿಕೆ ಮೆರವಣಿಗೆ ಹೊರಡುವುದು. ರಾತ್ರಿ ಗಂಟೆ 7.30ಕ್ಕೆ ಶ್ರೀದೇವರಿಗೆ ರಾತ್ರಿಪೂಜೆ, ಒಳಾಂಗಣ ಪಾಲ್ಕಿ ಉತ್ಸವದ ನಂತರ ಸಮಾರಾಧನೆ ಇರಲಿದೆ ಎಂದರು.
11ರಂದು ಬೆಳಗ್ಗೆ 8ಕ್ಕೆ ಚಕ್ರಾಬ್ಬ ಮಂಡಲ ಪೂಜೆ ಪ್ರಾರಂಭಗೊಳ್ಳುವುದು. 10ಕ್ಕೆ ಸಮಾಜ ಬಾಂಧವರಿಂದ ಲಕ್ಷ ತುಳಸಿ ಅರ್ಚನೆ, ಮಹಿಳೆಯರಿಂದ ಲಕ್ಷ ಪುಷ್ಪಾರ್ಚನೆ ನಡೆಯಲಿದೆ. ಬಂಟ್ವಾಳ ಶ್ರೀ ಕಾಶೀಮಠದ ವೃಂದಾವನದಲ್ಲಿ ಶ್ರೀ ಹನುಮಂತ ದೇವರಿಗೆ ಗಂಧಲೇಪನ ಸೇವೆ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಶ್ರೀಗಳಿಂದ ಮಂಗಳಾರತಿ, ಸಂಜೆ 5ರಿಂದ ಕುಂಕುಮಾರ್ಚನೆ, ಸಂಜೆ 6ಕ್ಕೆ ಶ್ರೀಗಳಿಂದ ಜೀವನದಿ ನೇತ್ರಾವತಿಗೆ ಗಂಗಾರತಿ ನಡೆಯಲಿದೆ.
ಬಳಿಕ ಗೋಪುರೋತ್ಸವ ಹನುಮಂತೋತ್ಸವ, ವಸಂತ ಪೂಜೆ, ಅಷ್ಟಾವಧಾನ ಸೇವೆ, ಶ್ರೀದೇವರು ಸಿಂಹಾಸನಕ್ಕೆ ಚಿತ್ತೈಸುವುದು ನಡೆಯಲಿದೆ.
12ರಂದು ಗರುಡೋತ್ಸವ, 13ರಂದು ಹನುಮಂತೋತ್ಸವ, 14ರಂದು ಚಂದ್ರಮಂಡಲೋತ್ಸವ, 15ರಂದು ಸಣ್ಣ ರಥೋತ್ಸವ ನಡೆಯಲಿದೆ.
16ರಂದು ಬ್ರಹ್ಮರಥೋತ್ಸವ: 16ರಂದು ಶನಿವಾರ 200ನೇ ವರ್ಷಾಚರಣೆಯ ಬ್ರಹ್ಮರಥೋತ್ಸವ ನಡೆಯಲಿದೆ. ಸಂಜೆ 4.30ಕ್ಕೆ ಯಜ್ಞಾರತಿ, ಪೂರ್ಣಾಹುತಿ ಬಲಿ ಬಳಿಕ ಸಂಜೆ 5.30ಕ್ಕೆ ಬ್ರಹ್ಮರಥಾರೋಹಣ, ಸಮಾರಾಧನೆ, ರಾತ್ರಿ 1 ಗಂಟೆಗೆ ಬ್ರಹ್ಮರಥೋತ್ಸವ ನಡೆಯಲಿದೆ. ಮಾರ್ಚ್ 17ರಂದು ಶ್ರೀಗಳಿಂದ ಸಭಾ ಕಾರ್ಯಕ್ರಮ ಪ್ರವಚನ ನಡೆಯಲಿದೆ. ಅವಭೃತೋತ್ಸವ ಕಾರ್ಯಕ್ರಮಗಳು ಅಂದು ನಡೆಯಲಿವೆ ಎಂದವರು ವಿವರಗಳನ್ನು ನೀಡಿದರು. ದೇವಳ ವತಿಯಿಂದ ನಡೆಯುತ್ತಿರುವ ಶಾಲೆಗೆ ಎರಡು ಬಸ್ ಗಳನ್ನು ಈ ಸಂದರ್ಭ ಕೊಡುಗೆಯಾಗಿ ನೀಡಲಾಗುವುದು. ರಥೋತ್ಸವ ಕಾರ್ಯಕ್ರಮದ ಅಂಗವಾಗಿ ವಿಶೇಷವಾಗಿ ಪಟ್ಟದ ದೇವರಿಗೆ 50 ಪವನ್ ಚಿನ್ನ ಹಾಗೂ ಉತ್ಸವ ಮೂರ್ತಿಗೆ 50 ಪವನ್ ಚಿನ್ನ, ಕಾಶಿಮಠಕ್ಕೆ ಚಿನ್ನದ ಸರ ಹಾಗೂ ಬ್ರಹ್ಮರಥಕ್ಕೆ 10 ಕೆ.ಜಿ.ಬೆಳ್ಳಿಯ ಪ್ರಭಾವಳಿ ನೀಡಲಾಗುತ್ತದೆ ಎಂದು ತಿಳಿಸಿದರು
ಶೈಕ್ಷಣಿಕವಾಗಿಯೂ ಅನೇಕ ಕೊಡುಗೆಗಳನ್ನು ಕ್ಷೇತ್ರದ ವತಿಯಿಂದ ನೀಡುತ್ತಿದ್ದು ಈಗಾಗಲೇ ಪ್ರಾಥಮಿಕ ಹಾಗೂ ಹೈಸ್ಕೂಲ್ ವರೆಗೆ ಶಿಕ್ಷಣ ನೀಡಲಾಗುತ್ತಿದ್ದು ಮುಂದಿನ ಅವಧಿಯಲ್ಲಿ ಪಿ.ಯು .ಕಾಲೇಜು ಆರಂಭಿಸಲಿದ್ದೇವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮೊಕ್ತೇಸರರಾದ ಭಾಮಿ ನಾಗೇಂದ್ರನಾಥ ಶೆಣೈ, ಬಿ.ಸುರೇಶ್ ಬಾಳಿಗಾ, ಪ್ರಮುಖರಾದ ವಸಂತ ಪ್ರಭು, ಶಿವಾನಂದ ಬಾಳಿಗಾ, ಬಸ್ತಿ ಮಾಧವ ಶೆಣೈ ಉಪಸ್ಥಿತರಿದ್ದರು.