ಬಂಟ್ವಾಳ: ಇಲ್ಲಿನ ಬಂಟ್ವಾಳ ಟೈಲರ್ಸ್ ಸಹಕಾರ ಸಂಘ ನಿಯಮಿತ ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ನಲ್ಲಿ ಸೋಮವಾರ ಶುಭಾರಂಭಗೊಂಡಿತು.
ಬಿ.ಸಿ.ರೋಡಿನ ವಕೀಲ ಅಶ್ವನಿ ಕುಮಾರ್ ರೈ ಸಹಕಾರ ಸಂಘವನ್ನು ಉದ್ಘಾಟಿಸಿ ಬಳಿಕ ಬಿ.ಸಿ.ರೋಡಿನ ಸೇವಾಂಜಲಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಉತ್ತಮ ಉದ್ದೇಶಕ್ಕಾಗಿ ಎಲ್ಲರ ಸಹಕಾರದೊಂದಿಗೆ ಟೈಲರ್ಸ್ ಸಹಕಾರ ಸಂಘ ಸ್ಥಾಪನೆಯಾಗಿದೆ.
ಟೈಲರ್ ವೃತ್ತಿ ಬಾಂಧವರಿಗೆ ಸಹಯವಾಗುವ ಉದ್ದೇಶದಿಂದ ನಮ್ಮೊಳಗಿನ ಹಣವನ್ನು ಸಂಚಯನ ಮಾಡಿಕೊಂಡು ಟೈಲರ್ಗಳ ಅಗತ್ಯಕ್ಕೆ ಅನುಗುಣವಾಗಿ ಆರ್ಥಿಕ ನೆರವು ಸಿಗಲು ಈ ಸಹಕಾರ ಸಂಘದಿಂದ ಸಾಧ್ಯವಾಗಲಿದೆ ಎಂದರು. ಈ ಸಹಕಾರ ಸಂಘ ನಮ್ಮದು ಎನ್ನುವ ಭಾವನೆಯೊಂದಿಗೆ ಕಾನೂನಿನ ಚೌಕಟ್ಟಿನೊಳಗೆ ಸಂಘವನ್ನು ಮುನ್ನಡೆಸಿಕೊಂಡು ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದಲ್ಲೂ ಸಂಘ ಸ್ಥಾಪನೆಯಾಗಲಿ ಎಂದು ಆಶಿಸಿದರು.
ಕೆಎಸ್ಟಿಎ ರಾಜಾಧ್ಯಕ್ಷ ನಾರಾಯಣ ಬಿ.ಎ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಟೈಲರ್ಗಳಿಗೆ ಕನಿಷ್ಟ ಮೊತ್ತದ ಸಾಲ ಪಡೆಯಲು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ತುಂಬಾ ಕಷ್ಟ ಪಡಬೇಕಿತ್ತು. ಈಗ ಟೈಲರ್ ಸಹಕಾರ ಸಂಘ ಆರಂಭವಾಗುವ ಮೂಲಕ ವೃತ್ತಿಬಾಂಧವರಿಗೆ ಅನುಕೂಲವಾಗಿದೆ, ಇದು ನಮಗೆಲ್ಲರಿಗೂ ಹೆಮ್ಮೆ ಎಂದು ತಿಳಿಸಿದರು.
ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ ೩ ವರ್ಷದ ಕನಸು ಇಂದು ನನಸಾಗಿದೆ. ಸಂಘ ಯಶಸ್ವಿಯಾಗಿ ಅಭಿವೃದ್ದಿ ಪಥದಲ್ಲಿ ಮುನ್ನಡೆಯಲು ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.
ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜಾ ಸೇಫ್ ಲಾಕರ್ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ದ.ಕ. ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಎಸ್ಸಿಡಿಸಿಸಿ ಬ್ಯಾಂಕ್ ಬಿ.ಸಿ.ರೋಡು ಶಾಖೆ ವ್ಯವಸ್ಥಾಪಕ ಗಣೇಶ್ ಕಾರಂತ್
ಉದ್ಯಮಿಗಳಾದ ಹಂಝ ಬಸ್ತಿಕೋಡಿ, ಸುಧಾಕರ ಆಚಾರ್ಯ, ಮಂಜುನಾಥ ಆಚಾರ್ಯ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಸುರೇಶ್ ಸಾಲ್ಯಾನ್ ಭಾಗವಹಿಸಿದ್ದರು.
ಸಂಘದ ಉಪಾಧ್ಯಕ್ಷ ಎ.ವಸಂತ ಮೂಲ್ಯ ನಿರ್ದೇಶಕರಾದ ಈಶ್ವರ್ ಕುಲಾಲ್, ಕೇಶವ ಆಚಾರ್ಯ, ಗಂಗಯ್ಯ ಪೂಜಾರಿ, ತುಳಸಿ ಆರ್., ಸೀತರಾಮ ಶೆಟ್ಟಿ, ಕುಮಾರ್, ಯಾದೇಶ್ ತುಂಬೆ, ಚಂದ್ರಾವತಿ, ಮಾಲತಿ, ಉಷಾಲಾಕ್ಷಿ ಉಪಸ್ಥಿತರಿದ್ದರು.
ಅಧ್ಯಕ್ಷ ನಾಗೇಶ್ ಎಂ. ಸ್ವಾಗತಿಸಿದರು, ನಿರ್ದೇಶಕ ಸುರೇಶ್ ಸಾಲ್ಯಾನ್ ವಂದಿಸಿದರು, ಪುರುಷೋತ್ತಮ ಅಂಚನ್ ಕಾರ್ಯಕ್ರಮ ನಿರೂಪಿಸಿದರು.