ಹರೇಕಳ: ದ.ಕ ಜಿಲ್ಲೆಯ ಇತಿಹಾಸ ಪ್ರಸಿದ್ದ ಕಾರಣಿಕ ಕ್ಷೇತ್ರ ಉಳ್ಳಾಲ ತಾಲೂಕಿನ ಅಂಬ್ಲಮೊಗರು, ಪಾವೂರು ಹರೆಕಳೆ ಮೂರು ಗ್ರಾಮ ವ್ಯಾಪ್ತಿಗೊಳಪಟ್ಟ ಮಾಗಣೆಯ ಕುತ್ತಿಮೊಗರು ಜಾತ್ರಾಮಹೋತ್ಸವದ ಪೂರ್ವಭಾವಿಯಾಗಿ ದೈವಗಳ ಭಂಡಾರ ಬರುವ ಕಾರ್ಯಕ್ರಮ ಶುಕ್ರವಾರ ಮುಂಜಾನೆ ಅತ್ಯಂತ ವಿಜ್ರಂಭಣೆಯಿಂದ ನಡೆಯಿತು.
ಡೆಬ್ಬೇಲಿ ಗುತ್ತಿನಿಂದ ಶ್ರೀ ಧೂಮಾವತಿ ಬಂಟ, ಪಾವೂರು ಗುತ್ತಿನಿಂದ ಶ್ರೀ ವೈದ್ಯನಾಥ ಹಾಗೂ ಮಣಿಬೆಟ್ಟು ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವಗಳ ಭಂಡಾರ ಏಕಕಾಲದಲ್ಲಿ ಹೊರಟು ಸಂಪಿಗೆದಡಿ ಮನೆತನಕ್ಕೊಳಪಟ್ಟ ಜಾಗದಲ್ಲಿ ಮೂರುದೈವಗಳು ಪರಸ್ಪರ ಭೇಟಿಯಾಗಿ ನೇಮೋತ್ಸವ ನಡೆಯುವುದು ಇಲ್ಲಿನ ವಿಶೇಷತೆ. ವರ್ಷಪ್ರತಿಯಂತೆ ಸಾವಿರಾರು ಮಂದಿ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೂವರು ದೈವಗಳ ಕೃಪೆಗೆ ಪಾತ್ರರಾದರು.
ತಮ್ಮ ಕಷ್ಟದ ಸಂದರ್ಭದಲ್ಲಿ ಹಾಗೂ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಹೆಳಿಕೊಂಡಂತೆ ಸೇವಂತಿಗೆ ಹಾಗೂ ಮಲ್ಲಿಗೆ ಹೂವಿನ ಹಾರವನ್ನು ದೈವಗಳ ಸನ್ನಿಧಾನಕ್ಕೆ ಸಮರ್ಪಿಸುವುದು ಇಲ್ಲಿ ನಡೆದು ಬಂದಿರುವ ಪದ್ದತಿ. ಪ್ರಾತಃಕಾಲದಲ್ಲಿ ೪ ಗಂಟೆಯ ಸುಮಾರಿಗೆ ದೈವಗಳ ಭಂಡಾರವೇರುವುದಾದರೂ ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಹಾಜರಿದ್ದು ಹರಕೆಯ ರೂಪದಲ್ಲಿ ಹೂವಿನ ಹಾರಗಳನ್ನು ಸಮರ್ಪಿಸುತ್ತಾರೆ. ದೈವ ದರ್ಶನದ ಬಳಿಕ ಪ್ರಸಾದ ರೂಪವಾಗಿ ಅದೇ ಹೂವಿನ ಹಾರವನ್ನು ಹಿಂಪಡೆಯುತ್ತಾರೆ. ಇಂತಹ ವಿಶಿಷ್ಠ ರೀತಿಯ ದೈವರಾಧನೆಯಲ್ಲಿ ಭಕ್ತ ಸಮುದಾಯ ಭಾಗಿಯಾಗಿ ಪುನೀತರಾದರು. ಬಳಿಕ ಮೈಸಂದಾಯ ದೈವಕ್ಕೆ ಹಗಲು ನೇಮೋತ್ಸವ ನಡೆಯಿತು.