ಬಂಟ್ವಾಳ: ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ನೃತ್ಯಧಾರ ಮತ್ತು ಕಲಾನಯನ ಪ್ರಶಸ್ತಿ ಪ್ರದಾನ ಸಮಾರಂಭ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಭಾನುವಾರ ಸಂಜೆ ನಡೆಯಿತು.
ಶ್ರೀ ಕರ್ನಾಟಕ ಕಲಾಶ್ರೀ ಕೆ. ವಿದ್ವಾನ್ ಚಂದ್ರಶೇಖರ್ ನಾವಡ ಅಧ್ಯಕ್ಷತೆ ವಹಿಸಿ ಮಾತನಾಡಿ
ಭಾರತೀಯ ಕಲಾ ಪ್ರಜ್ಞೆ , ಸಂಸ್ಕಾರ, ಸಂಸ್ಕೃತಿ ಹಾಗೂ ಕಲಾ ವಿದ್ಯೆಯನ್ನು ಕಲಿಸುವ ಶ್ರೀದೇವಿ ನೃತ್ಯಾರಾಧನಾ ಶಾಶ್ವತವಾಗಿ ಉಳಿಯ ಬೇಕು ಎಂದರು.
ಸಂಸ್ಕಾರ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ವಿದ್ಯಾರ್ಥಿಗಳಿಗೆ ಭಕ್ತಿ ಪೂರ್ವಕ ನಡೆ ನುಡಿಯನ್ನು ನೀಡುವುದು ಭಾರತೀಯ ನೃತ್ಯ ಕಲೆಗಳು ಮಾತ್ರ. ಮಕ್ಕಳಿಗೆ ಸಂಸ್ಕಾರ ಕಲಿಸಿ ಕೊಟ್ಟಾಗ ಅವರು ತಮ್ಮ ತಂದೆ ತಾಯಿಯನ್ನು ದೂರ ಮಾಡುವುದಿಲ್ಲ. ಅಂತಹ ಪಕ್ವತೆ ಭಾರತೀಯ ಶಾಸ್ತ್ರೀಯ ಕಲೆಗಳಲ್ಲಿದೆ ಎಂದು ತಿಳಿಸಿದರು.
ತುಳುವೆರೆ ಜನಪದ ಕೂಟ ಕೊಡಗು ಇದರ ಜಿಲ್ಲಾ ಖಜಾಂಚಿ ಪ್ರಭು ರೈ ಮಾತನಾಡಿ ವಿದ್ಯಾರ್ಥಿಗಳಿಗೆ ಕಲೆಯನ್ನು ಮತ್ತು ಪ್ರತಿಭೆಯನ್ನು ಈ ಸಂಸ್ಥೆ ಧಾರೆ ಎರೆಯುತ್ತ ಬರುತ್ತಿದೆ, ಕಲಾವಿದರನ್ನು ಬೆಳೆಸುವುದರ ಜೊತೆಗೆ ಕಲಾ ಸಾಧಕರನ್ನು ಗುರುತಿಸುವುದು ದೊಡ್ಡ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಇದರಿಂದ ಕಲಾವಿದರ ಜೀವನದ ವ್ಯಕ್ತಿತ್ವ ವಿಕಸನದ ಕೆಲಸವೂ ಆಗುತ್ತಿದೆ ಎಂದರು.
ನೃತ್ಯ ಗುರು ರೋಹಿಣಿ ಉದಯ್ ಪ್ರಾಸ್ತವಿಕವಾಗಿ ಮಾತನಾಡಿ ಸಂಸ್ಥೆ ಬೆಳೆದು ಬಂದ ಹಾದಿಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಚರ್ಮ ವಾದ್ಯ ತಯಾರಕ ಹಾಗೂ ಕೊಳಲು ವಾದಕ ಪಿ. ರಾಜರತ್ನಂ ದೇವಾಡಿಗ ಅವರಿಗೆ ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ರಸಿಕರತ್ನ ದಿ. ನಯನ ಕುಮಾರ್ ಸ್ಮರಣಾರ್ಥ ಕೊಡಮಾಡುವ ಕಲಾನಯನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಸ್ತ್ರ ವಿನ್ಯಾಸ ಕಾರ ಹಾಗೂ ಮುಖವರ್ಣಿಕೆ ಕಲಾವಿದ ಸುನೀಲ್ ಉಚ್ಚಿಲ ದಂಪತಿಯನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆ ತೇರ್ಗಡೆಯಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಈ ಸಂದರ್ಭ ನೃತ್ಯಗುರು ರೋಹಿಣಿ ಉದಯ್ ಅವರಿಗೆ ಶಿಷ್ಯಂದಿರು ಗುರು ಕಾಣಿಕೆ ನೀಡಿದರು. ಸಮಾರಂಭದಲ್ಲಿ ಹಿನ್ನಲೆ ವಾದಕರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಪ್ರಭು ಉಪಸ್ಥಿತರಿದ್ದರು.
ಸಂಚಾಲಕ ಉದಯ ವೆಂಕಟೇಶ ಭಟ್ ಸ್ವಾಗತಿಸಿದರು. ರೋಹಿಣಿ ಉದಯ್ ವಂದಿಸಿದರು, ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ನಡೆಯಿತು.