ಬಂಟ್ವಾಳ: ಸಾರ್ವಜನಿಕರಿಗೆ ಅತ್ಯಾವಶ್ಯಕವಾಗುವ ಕಂದಾಯ ಇಲಾಖೆಯ ಕೆಲಸ ಕಾರ್ಯಗಳು ತುಂಬಾ ವಿಳಂಬವಾಗುತ್ತಿದ್ದು, ಜನಸಾಮಾನ್ಯರು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಮೇಲೆ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು, ನೊಂದವರು ಜಿಲ್ಲಾಡಳಿತ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ತಾ.ಪಂ. ಮಾಜಿ ಸದಸ್ಯ ಪ್ರಭಾರಕ ಪ್ರಭು ಆರೋಪಿಸಿದರು.
ಅವರು ಶನಿವಾರ ಸಂಜೆ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಾರ್ವಜನಿಕರ
ಕುಂದು ಕೊರತೆ ನಿವಾರಿಸುವಲ್ಲಿ ಕಂದಾಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಸರಕಾರಿ ಜಮೀನು ದಾರ್ಖಾಸು ಮಂಜೂರಾತಿದಾರರು ತಮ್ಮ ಜಮೀನಿನ ಪ್ಲೋಟಿಂಗ್ ಬಗ್ಗೆ 1-5 ಅರ್ಜಿ ಸಲ್ಲಿಸಿ ಹತ್ತು ವರ್ಷಗಳಾದರೂ ಸಹ ಇನ್ನೂ ಮುಕ್ಕಿ ಸಿಕ್ಕಿಲ್ಲ. ಅಂಕಿ ಅಂಶಗಳ ಪ್ರಕಾರ ಬಂಟ್ವಾಳ ತಾಲೂಕಿನಲ್ಲಿ 2013 ರಿಂದ 2023 ರವರೆಗೆ 1-5 ಪ್ಲೋಟಿಂಗ್ ಮಾಡುವ 371 ಪ್ರಕರಣಗಳು ಬಾಕಿ ಉಳಿದು ಗೆದ್ದಲು ತಿನ್ನುತ್ತಿದೆ. 2014ರಲ್ಲಿ ಸಲ್ಲಿಸಿದ 45 ಪ್ರಕರಣಗಳು ಬಾಕಿ ಇದೆ. ೨೦೧೫ ರಲ್ಲಿ ೫೯ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ಬಾಕಿ ಇವೆ. ಈ ಬಾಕಿ ಪ್ರಕರಣಗಳಿಗೆ ಬಂಟ್ವಾಳ ತಾಲೂಕಿನಲ್ಲಿ ಸೇವೆ ಸಲ್ಲಿಸಿದ ತಹಶೀಲ್ದಾರರು, ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಂಗಳೂರು ಸಹಾಯಕ ಆಯುಕ್ತರು ಕಾರಣ ಎಂದು ಆರೋಪಿಸಿದರು.
ಸಾರ್ವಜನಿಕರು ದೂರು ಅರ್ಜಿ ಕೊಟ್ಟ ತಕ್ಷಣವೇ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿ ತನಿಖೆಗೆ ಸಮಿತಿ ರಚಿಸಿ ತನಿಖೆ ಮಾಡುವ ಜಿಲ್ಲಾಧಿಕಾರಿಗಳು ಮಂಗಳೂರು ಸಹಾಯಕ ಆಯುಕ್ತರು 1-5 ಪ್ಲೋಟಿಂಗ್ ಪ್ರಕರಣ ವಿಲೇವಾರಿಗೆ ಯಾಕೆ ಸಮಿತಿ ರಚಿಸಿ ಕಡತ ವಿಲೇವಾರಿ ಮಾಡಿಲ್ಲ ಎಂದು ಪ್ರಶ್ನಿಸಿದ ಅವರು ಕುಕ್ಕಿಪಾಡಿ ಗ್ರಾಮದ ಲೀಲಾವತಿ ನಾರಾಯಣ ಶೆಟ್ಟಿ ಎಂಬುವವರು ಪ್ಲೋಟಿಂಗ್ಗೆ (1-5)ಅರ್ಜಿ ಕೊಟ್ಟು 6 ವರ್ಷಗಳಾಗಿದ್ದೂ, ಕಂದಾಯ ಇಲಾಖೆಯ ಜನಸಂಪರ್ಕ ಸಭೆಯಲ್ಲಿಅರ್ಜಿಕೊಟ್ಟು, ಹಲವು ಬಾರಿ ತಾಲೂಕು ಕಛೇರಿ ಮಂಗಳೂರು ಕಛೇರಿಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಕಳೆದ 10 ವರ್ಷಗಳಲ್ಲಿ ಬಂಟ್ವಾಳ ತಾಲೂಕು ಕಛೇರಿಯ ಜಮಾಭಂದಿ, ವಾರ್ಷಿಕ ತಪಾಸಣೆಯನ್ನು ಜಿಲ್ಲಾಧಿಕಾರಿಗಳು,ಸಹಾಯಕ ಆಯುಕ್ತರು ಮಾಡಿಲ್ಲ, ಜಿಲ್ಲೆಯಲ್ಲಿ ವಾರ್ಷಿಕವಾಗಿ ಮರಳು ಸಾಗಾಟ ಪರವಾನಿಗೆ ಮತ್ತು ನಿರ್ಮಾಣವಾಗುತ್ತಿರುವ ಕಟ್ಟಡಗಳ ಬಗ್ಗೆ ತುಲನೆ ಮಾಡಿ ನೋಡಿದಾಗ ಶೇ 60ರಷ್ಟು ಮರಳು ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಾಟವಾಗುತ್ತಿರುವುದಾಗಿದೆ. ಈ ಬಗ್ಗೆ ಜಿಲ್ಲಾಡಳಿತವು ಏನು ಕ್ರಮ ಕೈಗೊಂಡಿದೆ. ವಾರ್ಷಿಕವಾಗಿ ಎಷ್ಟು ಮರಳಿನ ಬೇಡಿಕೆಯಿದೆ. ಜಿಲ್ಲೆಯಲ್ಲಿ ಲಭ್ಯವಿರುವ ಮರಳಿನ ದಿಣ್ಣೆಗಳು ಎಷ್ಟು ಇವೆ. ಬೇಡಿಕೆಗೆ ಅನುಗುಣವಾಗಿ ಯಾವ ರೀತಿಯಲ್ಲಿ ಹೇಗೆ ಅನುಮತಿ ನೀಡಬಹುದು ಎಂಬ ಯೋಜನೆ ರೂಪಿಸಬೇಕು ಎಂದು ಪ್ರಭಾಕರ ಪ್ರಭು ಆಗ್ರಹಿಸಿದರು.
ಒಂದು ಕಡೆಯಲ್ಲಿ ಮರಳು ಸಾಗಾಟ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದರೂ ಜಿಲ್ಲೆಯಲ್ಲಿನ ಕಟ್ಟಡಗಳೆಲ್ಲವೂ ಮರಳು ಬಳಕೆ ಮಾಡಿಕೊಂಡು ನಿರ್ಮಾಣವಾಗುತ್ತೀವೆ. ಇದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟ, ಬಳಕೆದಾರರಿಗೂ ನಷ್ಟ, ಮರಳು ಸಾಗಾಟಗಾರರಿಗೂ ತಲೆನೋವಿನ ಕಷ್ಟ ಎಂದರು.
ಅಸಮರ್ಪಕ ಮರಳು ನೀತಿ:
ಜಿಲ್ಲಾಡಳಿದಿಂದ ಮರಳು ಪರವಾನಗೆ ಪಡೆದವರು ಸಹ ಶೇ 25 ಮರಳನ್ನು ಮಾತ್ರ ಸಾಗಾಣಿಕೆ ಪರ್ಮಿಟ್ ನೀಡುತ್ತಿದ್ದು, ಉಳಿದ ಶೇ.೭೫ ಮರಳನ್ನು ಪರ್ಮಿಟ್ ಇಲ್ಲದೆ ನೀಡುತ್ತಿರುವುದರಿಂದ ಪರ್ಮಿಟ್ ಇಲ್ಲದೆ ಸಾಗಾಟ ಮಾಡಬೇಕಾಗಿದ್ದು ಮರಳು ಸಾಗಾಟದಾರರಿಗೆ ತುಂಬಾ ತೊಂದರೆಯಾಗುತ್ತಿದ್ದು, ಸಾವಿರಗಟ್ಟಲೇ ಹಣವನ್ನು ಕೆಲವೊಂದು ನಿರ್ದಿಷ್ಟ ಪಡಿಸಿದ ಇಲಾಖೆಗೆ ಮಾಮುಲಿಯನ್ನು ಲಂಚ ರೂಪದಲ್ಲಿ ನೀಡಬೇಕಾಗಿರುವುದರಿಂದ ಮರಳು ಸಾಗಾಟದಾರ ಜನಸಾಮಾನ್ಯರಿಂದ ಅಧಿಕ ಪ್ರಮಾಣದಲ್ಲಿ ವಸೂಲಿ ಮಾಡುತ್ತಿರುವುದರಿಂದ ಪರವಾನಿಗೆ ಪಡೆದವರು ಪ್ರತಿಯೊಬ್ಬ ಮರಳು ಸಾಗಾಟದಾರರಿಗೆ ಪರ್ಮಿಟ್ ಕಡ್ಡಾಯವಾಗಿ ನೀಡಬೇಕು.ಈ ಬಗ್ಗೆ ಗಣಿ ಇಲಾಖೆ ಜಾಗ್ರತೆ ವಹಿಸಬೇಕು ಎಂದ ಅವರು ಮರಳು ತೆಗೆಯುವವರು ಲೋಡ್ ಮಾಡುವುದು ಎಲ್ಲಾ ಯಂತ್ರದಿಂದಲೇ ಇದಕ್ಕಾಗಿ ಪರವಾನಾಗಿ ನೀಡುವ ನಿಯಾಮವಳಿ ಸರಳೀಕರಿಸಬೇಕು,ಯಾಂತ್ರಿಕವಾಗಿ ಬಳಸಲು ಅನುಮತಿ ನೀಡಬೇಕು ಎಂದರು.
ಅಕ್ರಮ ಮರಳು ತಡೆಗಟ್ಟುವ ಅಧಿಕಾರಿಗಳ ಸಭೆಗಳಿಗಿಂತ ಮೊದಲು ಸಕ್ರಮ ಮರಳುಗಾರಿಕೆ ಬಗ್ಗೆ ಸಭೆ ನಡೆಸಿ. ಜಿಲ್ಲೆಯಲ್ಲಿ ಎಷ್ಟು ಮರಳಿನ ಅವಶ್ಯಕತೆ ಇದೆಯೋ ಅಷ್ಟು ಪ್ರಮಾಣದ ಮರಳಿಗೆ ಪರ್ಮಿಟ್ ನೀಡಿದರೆ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುವ ಪ್ರಮೇಯವೇ ಉದ್ಬವಿಸುವುದಿಲ್ಲ. ಜಿಲ್ಲೆಗೆ ಬೇಕಾಗುವಷ್ಟು ಮರಳಿನ ಬಗ್ಗೆ ಸಮರ್ಪಕ ಕ್ರಮ ಕೈಗೊಳ್ಳಬೇಕು.
ಜಿಲ್ಲಾಧಿಕಾರಿಯವರೂ ಇನ್ನಾದರೂ ಮರಳು ವಿಷಯದ ಬಗ್ಗೆ ಎಚ್ಚೆತ್ತುಕೊಂಡು ಬಳಕೆದಾರರಿಗೆ ಸೂಸುತ್ರವಾಗಿ ಮರಳು ಕೊಡಬೇಕು . ಸಾಗಾಟಗಾರರಿಗೆ ಮಾಮುಲಿ ವಸೂಲಿ ದಂಧೆ ತಡೆಗಟ್ಟುವ ಬಗ್ಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.