ಬಂಟ್ವಾಳ: ನಾವು ಮಾಡುವ ಕರ್ಮವನ್ನು ನಿಷ್ಠೆ, ಶ್ರದ್ಧೆಯಿಂದ ಮಾಡಿದರೆ ಭಗವಂತ ಒಲಿಯುತ್ತಾನೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ವೆಂಕಟರಮಣ ಅಸ್ರಣ್ಣ ಹೇಳಿದರು.
ಮೊಡಂಕಾಪುವಿನ ಶಮ್ಯಾಪ್ರಾಸ ಮನೆಯಲ್ಲಿ ನಡೆದ ಸರಿದಂತರ ಗೌರ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಕೀಲ ಮಹೇಶ್ ಕಜೆ ಅವರು ಬದುಕು ಭಾಗ್ಯ- ಜೀವನ ಸುಗಮ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ ನಮ್ಮಲ್ಲಿ ಹೃದಯ ವೈಶಾಲ್ಯತೆ ಇದ್ದಾಗ ರಸವತ್ತಾಗಿ ಹಾಗೂ ಸುಗಮವಾಗಿ ಬದುಕಲು ಸಾಧ್ಯವಿದೆ. ಹಣವಿಲ್ಲದಿರುವುದು ಬಡತನವಲ್ಲ ಬದಲಾಗಿ ಪ್ರೀತಿ ಒಲುಮೆಯಿಲ್ಲದಿರುವುದೇ ಬಡತನ ಎಂದು ವ್ಯಾಖ್ಯಾನಿಸಿದ ಅವರು ಬದುಕು ಭಾಗ್ಯ ಆಗಬೇಕಾದರೆ ನಮ್ಮಲ್ಲಿ ಪ್ರಯತ್ನ ಬೇಕು ಎಂದರು.
ಬಂಟ್ವಾಳದ ಉದ್ಯಮಿ ಬಿ. ಲಕ್ಷ್ಮಣ ಅಚ್ಯುತ ಬಾಳಿಗ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವೈದ್ಯೆ, ಸಮಾಜಸೇವಕಿ ಡಾ. ಗೌರಿ ಪೈ ಅವರಿಗೆ ಸರಿದಂತರ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಚಾಲಕ ಪ್ರೊ. ರಾಜಮಣಿ ರಾಮಕುಂಜ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಭಾರತೀ ರಾಜಮಣಿ ಸನ್ಮಾನಿತರ ಅಭಿನಂದನಾ ಪತ್ರ ವಾಚಿಸಿದರು. ಮೇಘನ ರಾವ್ ದೇಶಭಕ್ತಿ ಗೀತೆ ಹಾಡಿದರು. ಮೇಧ ರಾಮಕುಂಜ ವಂದಿಸಿದರು, ಜಗದೀಶ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಧಾತ್ರಿ ರಾಮಕುಂಜ ಸಹಕರಿಸಿದರು.