ಬಂಟ್ವಾಳ: ಕಳೆದ 18 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರನ್ನು ಕೇಂದ್ರವಾಗಿಸಿರಿಕೊಂಡು, ಇಸ್ಕಾನ್ ಅಕ್ಷಯ ಪಾತ್ರೆ ಫೌಂಡೇಶನ್ ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುತ್ತಿದೆ. ಇದನ್ನು ವಿಸ್ತರಿಸಿರುವ ಸಂಸ್ಥೆ, ಇದೀಗ ದಿನಕ್ಕೆ 25 ಸಾವಿರ ಮಕ್ಕಳಿಗೆ ಬಿಸಿಯೂಟ ನೀಡಲು ಸಜ್ಜಾಗುತ್ತಿದೆ. ಹೆಚ್ಚು ಬೇಡಿಕೆ ಹಿನ್ನೆಲೆ, ಇನ್ನಷ್ಟು ವಿದ್ಯಾರ್ಥಿಗಳನ್ನು ತಲುಪುವ ಉದ್ದೇಶದಿಂದ ಅಕ್ಷಯಪಾತ್ರೆ ಫೌಂಡೇಶನ್ ಈ ಯೋಜನೆ ಆರಂಭಿಸಿದೆ. ಬಂಟ್ವಾಳದ ಬೆಂಜನಪದವು ಎಂಬಲ್ಲಿ ಈಗಾಗಲೇ ಇದರ ಘಟಕ ತಯಾರಾಗಿದ್ದು, ಡಿ.೩ರಂದು ಭಾನುವಾರ ವಿದ್ಯುಕ್ತವಾಗಿ ಚಾಲನೆಗೊಳ್ಳಲಿದೆ ಎಂದು ಇಸ್ಕಾನ್ ಸಂಸ್ಥೆಯ ಗುಣಕರ ರಾಮದಾಸ ಸ್ವಾಮೀಜಿ ತಿಳಿಸಿದರು.
ಅವರು ಬಿ.ಸಿ.ರೋಡು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಡಿ. 3ರಂದು ಭಾನುವಾರ ಬೆಳಿಗ್ಗೆ 11.30ಕ್ಕೆ ಮೆಗಾ ಕಿಚನ್ ಉದ್ಘಾಟನಾ ಸಮಾರಂಭ ನಡೆಯಲಿದೆ. ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ದಿವ್ಯ ಉಪಸ್ಥಿತಿಯಲ್ಲಿ ಅಕ್ಷಯ ಪಾತ್ರೆ ಫೌಂಡೇಷನ್ ಅಧ್ಯಕ್ಷ ಮಧು ಪಂಡಿತದಾಸ, ಉಪಾಧ್ಯಕ್ಷ ಚಂಚಲಪತಿ ದಾಸ, ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲು, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಉದ್ಯಮಿ ಡಾ. ಪಿ ದಯಾನಂದ ಪೈ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ ಕೆ. ಭಾಗವಹಿಸುವರುಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಒಟ್ಟು 4.5 ಲಕ್ಷ ಮಕ್ಕಳಿಗೆ ಇಸ್ಕಾನ್ ವತಿಯಿಂದ ಪೌಷ್ಠಿಕ ಬಿಸಿಯೂಟ ಸರಬರಾಜಾಗುತ್ತಿದೆ. ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ, ಮೈಸೂರು, ಮಂಗಳೂರು ಪ್ರದೇಶಗಳಿಂದ ಅಕ್ಷಯ ಪಾತ್ರೆ ಕೆಲಸ ಮಾಡುತ್ತಿದೆ. ದೇಶಾದ್ಯಂತ 2025ರೊಳಗೆ 4 ಮಿಲಿಯನ್ ಮಕ್ಕಳಿಗೆ ಅನುಕೂಲ ಕಲ್ಪಿಸುವ ಗುರಿಯಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಸ್ಕಾನ್ ಅಕ್ಷಯ ಪಾತ್ರೆ ಯೋಜನೆ ಇದ್ದು ಜಿಲ್ಲೆಯ ಹಲವು ಶಾಲೆಗಳಿಂದ ಬೇಡಿಕೆ ಬಂದಿದೆ. ಇವುಗಳನ್ನು ಪೂರೈಸಲು ಸುಸಜ್ಜಿತ ಅಡುಗೆಮನೆಯ ಅವಶ್ಯಕತೆ ಇತ್ತು. ಆದರೆ ಮೆಗಾ ಕಿಚನ್ ನಿರ್ಮಾಣಕ್ಕೆ ಸೂಕ್ತ ಜಾಗ ಹುಡುಕಾಟ ನಡೆದಿತ್ತು. ಬೆಂಜನಪದವು ಬಳಿ ಜಾಗ ಸಿಕ್ಕಿದ್ದು, ಇದಕ್ಕೆ 2017ರಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಇದೀಗ ಮೆಗಾ ಕಿಚನ್ ಬಿಸಿಯೂಟ ತಯಾರಿಕೆಗೆ ಸಿದ್ಧವಾಗುತ್ತಿದೆ.
ಊರ್ವ ಮಾರ್ಕೆಟ್ನಲ್ಲಿರುವ ಬಾಡಿಗೆ ಕಟ್ಟಡದಲ್ಲಿ ಪ್ರತಿನಿತ್ಯ 18 ಸಾವಿರ ಮಕ್ಕಳಿಗೆ ನಿತ್ಯ ಅನ್ನದಾಸೋಹಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇಲ್ಲಿಂದ ಅದಕ್ಕೆಂದೇ ಮೀಸಲಾದ ವಾಹನಗಳಲ್ಲಿ ದೂರದ ಊರುಗಳಿಗೆ ತೆರಳುತ್ತದೆ. ಅಲ್ಲಿ ಬಿಸಿಯೂಟದ ಪಾತ್ರೆಗಳನ್ನು ಇಳಿಸಿ, ಶಾಲೆಗಳಿಗೆ ನೀಡಲಾಗುತ್ತದೆ.
ಬಂಟ್ವಾಳದ ಬೆಂಜನಪದವಿನಲ್ಲಿ ಹೈಟೆಕ್ ಕಿಚನ್ ಆರಂಭವಾಗುತ್ತಿದೆ. ಇಲ್ಲಿ ಏಕಕಾಲಕ್ಕೆ 25 ಸಾವಿರ ಮಕ್ಕಳಿಗೆ ಬೇಕಾದ ಪೌಷ್ಠಿಕ ಆಹಾರವನ್ನು ಪ್ರತಿದಿನ ತಯಾರು ಮಾಡಲು ಅವಕಾಶವಿದೆ. ಇಲ್ಲಿ ಪ್ರತಿಯೊಂದಕ್ಕೂ ತಂತ್ರಜ್ಞಾನ ಬಳಕೆಯಾಗುತ್ತಿದೆ. ತರಕಾರಿ ಕತ್ತರಿಸುವಾಗಲೂ ಜಾಗ್ರತೆ ವಹಿಸಲಾಗುತ್ತದೆ ಎಂದರು.
ಅಡುಗೆ ಕೋಣೆ ಐಎಸ್ಒ 22000 ಆಹಾರ ಸುರಕ್ಷತೆ ಮಾನದಂಡದ ಪ್ರಕಾರ ಕೆಲಸ ನಿರ್ವಹಿಸುತ್ತಿದೆ. ಪ್ರತಿ ಅಡುಗೆ ಕೋಣೆಯಲ್ಲೂ ಕ್ವಾಲಿಟಿ ಕಂಟ್ರೋಲರ್ ಇರುತ್ತಾರೆ. ಬರುವ ಎಲ್ಲಾ ಪದಾರ್ಥಗಳನ್ನು ತಪಾಸಣೆ ಮಾಡಲಾಗುತ್ತದೆ. ಅವುಗಳನ್ನು ಶುದ್ಧಗೊಳಿಸುವ ಹಂತದಲ್ಲೂ ಗುಣಮಟ್ಟ ಕಾಪಾಡಲಾಗುತ್ತದೆ. ಅಡುಗೆ ಕೋಣೆಯಲ್ಲಿ ಯಾಂತ್ರೀಕೃತ ವ್ಯವಸ್ಥೆ ಇದ್ದು, ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಾಟ ಮಾಡುವ ಸಂದರ್ಭದಲ್ಲೂ ಜಾಗರೂಕತೆ ವಹಿಸಲಾಗುತ್ತದೆ. ಆದಷ್ಟು ಯಾವ ಪದಾರ್ಥಗಳನ್ನು ಮುಟ್ಟದಂತೆ
ಅಡುಗೆ ತಯಾರಿಸಲಾಗುತ್ತದೆ. ಪ್ರಸ್ತುತ ಅಕ್ಷಯ ಪಾತ್ರೆ ಫೌಂಡೇಶನ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 124 ಸರಕಾರಿ ಹಾಗೂ 41 ಅನುದಾನಿತ ಶಾಲೆಗಳು ಸೇರಿ ಒಟ್ಟು 165 ಶಾಲೆಗಳಿಗೆ ಬಿಸಿಯೂಟ ಸರಬರಾಜು ಮಾಡುತ್ತದೆ. ಈಗಾಗಲೇ ಪುತ್ತೂರುವರೆಗೆ ಈ ಆಹಾರ ಸರಬರಾಜಾಗುತ್ತದೆ. ಬೆಳಗ್ಗೆ ಆಹಾರ ತಯಾರಾಗಿ ಸಂಜೆ 4 ಗಂಟೆಯೊಳಗೆ ಅದನ್ನು ಸೇವಿಸಬೇಕು ಎಂಬ ಸೂಚನೆಯೊಂದಿಗೆ ಸರಬರಾಜಾಗುತ್ತಿದೆ. ಹೀಗಾಗಿ ತೀರಾ ದೂರದ ಪ್ರದೇಶಗಳಿಗೆ ಕಳುಹಿಸುವುದು ಕಷ್ಟವಾದ ಕಾರಣ, ಬೆಂಜನಪದವಿನಲ್ಲಿ ಆರಂಭಗೊಳ್ಳಲಿರುವ ಮೆಗಾಕಿಚನ್ನಲ್ಲಿ ಈ ಸಮಸ್ಯೆ ನೀಗಬಹುದು. ಈಗಾಗಲೇ ಹಲವಾರು ಶಾಲೆಗಳಿಂದ ಬೇಡಿಕೆ ಬಂದಿದೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಚೇತನ್, ಮ್ಯಾನೇಜರ್ ನವೀನ್ ಕುಮಾರ್ ಉಪಸ್ಥಿತರಿದ್ದರು.
ಮುಖಪುಟ
ಸುದ್ದಿ
ಬಂಟ್ವಾಳ ಫರಂಗಿಪೇಟೆ
ವಾಮದಪದವು
ವಿಟ್ಲ
ಮಾಣಿ
ಕಲ್ಲಡ್ಕ
ವಿಶೇಷ-ವೈವಿಧ್ಯ
ಸಮಾಜಮುಖಿ
ಯೂಟ್ಯೂಬ್ ಚಾನೆಲ್/ವಿಡಿಯೋ
ನಾಳೆ ಬೆಂಜನಪದವಿನಲ್ಲಿ ಅಕ್ಷಯ ಪಾತ್ರ ಫೌಂಡೇಷನ್ನ ಹೈಟೆಕ್ ಮೆಗಾ ಕಿಚನ್ ಶುಭಾರಂಭ
Advertisement
Advertisement
Next Article ಕಡೇಶಿವಾಲಯದಲ್ಲಿ ಹದಿನೇಳನೇ ಮಕ್ಕಳ ಸಾಹಿತ್ಯ ಸಮ್ಮೇಳನ
Related Posts
Add A Comment