ಬಂಟ್ವಾಳ: ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಶನಿವಾರ ನಡೆಯಿತು.
ಬೆಳಿಗ್ಗೆ ಶಾಲಾ ಎನ್ಸಿಸಿ ತಂಡ ಹಾಗೂ ಬಣ್ಣದ ಸಮವಸ್ತ್ರ ತೊಟ್ಟ ವಿದ್ಯಾರ್ಥಿಗಳಿಂದ ಶಾಲಾ ಮೈದಾನದಲ್ಲಿ ಆಕರ್ಷಕ ಪಥಸಂಚಲನ ನಡೆದು ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು. ಉದ್ಯಮಿ ಕೃಷ್ಣಾನಂದ ಅವರು ಧ್ವಜಾರೋಹಣ ನೆರವೇರಿಸಿದರು. ಶಾಲೆಯ ಸಾಧಕ ಕ್ರೀಡಾಪಟುಗಳು ಕ್ರೀಡಾಜ್ಯೋತಿಯನ್ನು ತಂದು ಅತಿಥಿ ರಾಜೇಶ್ ನೆಕ್ಕರೆ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಶಾಲಾ ದತ್ತು ಸಂಸ್ಥೆ ಶ್ರೀದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು. ಸೋಲು ಗೆಲುವು ಸಹಜವಾದುದು. ಗೆಲುವಿಗೆ ಹಿಗ್ಗದೆ, ಸೋಲಿಗೆ ಕುಗ್ಗದೆ ಕ್ರೀಡಾಸ್ಪೂರ್ತಿಯಿಂದ ತೊಡಗಿಸಿಕೊಳ್ಳಬೇಕು, ಇಂದಿನ ಕ್ರೀಡಾಕೂಟ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಪ್ರೇರಣದಾಯಕವಾಗಲಿ ಎಂದು ಶುಭ ಹಾರೈಸಿದರು.
ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಗೆದ್ದುಕೊಂಡ ಪ್ರಚನ್ ಪೂಜಾರಿಯನ್ನು ಅಭಿನಂದಿಸಲಾಯಿತು.
ಇದೇ ವೇಳೆ ಮ್ಯಾಥ್ಸ್ ಕ್ಲಬ್ ಆಯೋಜಿಸಿದ ಮೆಟ್ರಿಕ್ ಮೇಳವನ್ನು ಉದ್ಯಮಿ ನಾಗೇಶ್ ಸಾಲ್ಯಾನ್ ಉದ್ಘಾಟಿಸಿದರು. ಪ್ರೌಢಶಾಲಾ ವಿಭಾಗದ ಎಸ್ಡಿಎಂಸಿ ಕಾರ್ಯಾಧ್ಯಕ್ಷ ಪುರುಷೋತ್ತಮ ಅಂಚನ್, ಪ್ರಾಥಮಿಕ ಶಾಲಾ ವಿಭಾಗದ ಎಸ್ಡಿಎಂಸಿ ಉಪಾಧ್ಯಕ್ಷ ಬಾಲಕೃಷ್ಣ ಜಿ., ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಸದಸ್ಯರಾದ ರಾಮಚಂದ್ರ ಪೂಜಾರಿ ಕರೆಂಕಿ, ನವೀನ್ ಸೇಸಗುರಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ರಮಾನಂದ ಸ್ವಾಗತಿಸಿ, ಸಹ ಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾಕೂಟಗಳು ನಡೆಯಿತು. ಮೆಟ್ರಿಕ್ ಮೇಳದಲ್ಲಿ ಶಾಲಾ ವಿದ್ಯಾರ್ಥಿಗಳು ಭರ್ಜರಿ ವ್ಯಾಪಾರ ನಡೆಸಿ ವ್ಯಾವಹಾರಿಕ ಜ್ಞಾನವನ್ನು ಹೆಚ್ಚಿಸಿಕೊಂಡರು.