ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ 13ನೇ ಪುಣಚ ಶಾಖೆ ಭಾನುವಾರ ಪುಣಚ ಪರಿಯಲ್ತಡ್ಕ ಪ್ರಗತಿ ಕಾಂಪ್ಲೆಕ್ಸ್ನಲ್ಲಿ ಶುಭಾರಂಭ ಗೊಂಡಿತು.
ನೂತನ ಶಾಖೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು. ಅವರು ಮಾತನಾಡಿ ದ.ಕ. ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್ಗಳು ಮುಂಚೂಣಿಯಲ್ಲಿದೆ. ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ತುಲನೆ ಮಾಡಿದರೆ ಇಂದು ಸಹಕಾರಿ ಬ್ಯಾಂಕ್ಗಳು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ ಎಂದರು. ಉದ್ಯಮ ಕ್ಷೇತ್ರ ಪ್ರಗತಿ ಕಂಡಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಅಭಿವೃದ್ಧಿಯನ್ನು ಕಾಣಲು ಸಾಧ್ಯವಿದೆ, ವ್ಯವಹಾರ ಇದ್ದರೆ ಮಾತ್ರ ಬ್ಯಾಂಕ್ಗಳು, ಸಹಕಾರಿ ಸಂಘಗಳು ಅಭಿವೃದ್ಧಿಯಾಗುತ್ತದೆ ಎಂದ ಅವರು ಇಂದು ಸಹಕಾರಿ ಕ್ಷೇತ್ರದಲ್ಲೂ ಸೌಲಭ್ಯಗಳನ್ನು ಕೊಡುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು. ಮಹಿಳೆಯರಿಂದು ಆರ್ಥಿಕವಾಗಿ ಸಬಲರಾಗುತ್ತಿದ್ದು ಸರಕಾರದ ಗೃಹಲಕ್ಷಿ ಯೋಜನೆಯ ಮೂಲಕ 2 ಸಾವಿರ ಹಣವನ್ನು ಪಡೆಯುತ್ತಿದ್ದಾರೆ. ಅವುಗಳನ್ನು ಸಹಕಾರಿ ಸಂಘಗಳ ಮೂಲಕ ಉಳಿತಾಯ ಮಾಡುವುದರಿಂದ ತಾವು ಸಬಲರಾಗುವುದರ ಜೊತೆಗೆ ಸಹಕಾರಿ ಸಂಘಗಳ ಅಭ್ಯುದಯವೂ ಆಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಬಿ. ರಮಾನಾಥ ರೈ ಠೇವಣಿ ಪತ್ರ ವಿತರಿಸಿ ಮಾತನಾಡಿ ಮೂರ್ತೆದಾರಿಕೆ ಕೆಲಸವನ್ನು ಮಾತ್ರ ನಂಬಿಕೊಂಡು ಜೀವನ ಮಾಡುವ ಬದಲು ಅರ್ಥಿಕ ಸಬಲೀಕರಣಕಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎನ್ನುವ ಬ್ರಹ್ಮಶ್ರೀ ನಾರಾಯಣ ಗುರುಗಳ ಸೈದ್ದಾಂತಿಕ ನಿಲುವಿಗೆ ಪೂರಕವಾಗಿ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಸ್ಥಾಪನೆಯಾಗಿದೆ. ಇದು ಕೇವಲ ಸಹಕಾರಿ ಸಂಘವಾಗಿ ಮಾತ್ರ ಉಳಿಯದೇ ಸಂಘ ಸ್ಥಾಪನೆಯಾದ ಬಳಿಕ ಸದಸ್ಯರಲ್ಲಿ ಆರ್ಥಿಕ ಚಟುವಟಿಕೆ ಗರಿಗೆದರಿದೆ, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದೆ, 35 ಕೋಟಿ ರೂಪಾಯಿಗಿಂತಲೂ ಅಧಿಕ ಹಣವನ್ನು ಸಾಲ ನೀಡುವ ಮೂಲಕ ಜನರ ಬದುಕಿಗೆ ನೆರವಾಗಿದೆ ಎಂದರು.
ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜನರಿಗೆ ಸಹಾಯ ಮಾಡಲು ಇರುವ ಕ್ಷೇತ್ರ ಸಹಕಾರಿ ಕ್ಷೇತ್ರ. ಬಡವರು ಸಾಲಕ್ಕಾಗಿ ಬ್ಯಾಂಕ್ ಗೆ ಅಲೆದಾಡುತ್ತಿದ್ದ ಕಾಲಘಟ್ಟದಲ್ಲಿ ಸಹಕಾರಿ ಸಂಘದ ಮೂಲಕ ಬಡವರಿಗೆ ಸಾಲ ನೀಡುವ ಕಾರ್ಯ ಮಾಡಲಾಗಿತ್ತು. ಆ ಪ್ರೇರಣೆಯಿಂದಲೇ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘವನ್ನು ಸ್ಥಾಪಿಸಲಾಗಿದೆ. ನಮ್ಮ ಸಂಘದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ನೀಡಿದ ಸಾಲದಲ್ಲಿ ಶೇ. 97 ವಸೂಲಾತಿ ಆಗುತ್ತಿದೆ. ಮಹಿಳೆಯರು ಯಾವುದೇ ವಂಚನೆ ಮಾಡದೇ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಾರೆ ಎಂದ ಅವರು ಸಿಬ್ಬಂದಿಗಳ ಸೇವೆ, ನಂಬಿಕೆಯ ಮೇಲೆ ಗ್ರಾಹಕರು ಬ್ಯಾಂಕ್ ಗೆ ಬರುತ್ತಾರೆ. ಆ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಪುಣಚ ಗ್ರಾಮ ಪಂಚಾಯತಿ ಅಧ್ಯಕ್ಷೆ ಬೇಬಿ ಭದ್ರತಾ ಕೊಠಡಿ ಉದ್ಘಾಟಿಸಿದರು. ಪರಿಯಲ್ತಡ್ಕ ಜುಮ್ಮಾ ಮಸೀದಿ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ. ಎಸ್. ಮಹಮ್ಮದ್ ಗಣಕಯಂತ್ರ ವ್ಯವಸ್ಥೆ ಉದ್ಘಾಟಿಸಿದರು. ಪುತ್ತೂರಿನ ಹಿರಿಯ ನ್ಯಾಯವಾದಿ, ಪುತ್ತೂರು ಟೌನ್ ಕೋ ಅಪರೇಟಿವ್ ಬ್ಯಾಂಕ್ ಲಿ. ಅಧ್ಯಕ್ಷ ಎನ್. ಕಿಶೋರ್ ಕೊಳತ್ತಾಯ ನೂತನ ಗ್ರಾಹಕರಿಗೆ ಉಳಿತಾಯ ಖಾತೆ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಪುಣಚ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಅಧ್ಯಕ್ಷ, ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಸದಸ್ಯ ಎಸ್. ಆರ್. ರಂಗಮೂರ್ತಿ, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಮಾಜಿ ಅಧ್ಯಕ್ಷ ಹಾಗೂ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.) ಬೆಳ್ತಂಗಡಿ ಇದರ ನಿರ್ದೇಶಕ ಡಾ. ರಾಜರಾಮ್ ಕೆ.ಬಿ., ಪುಣಚ ಮನೆಲಾ ಕ್ರಿಸ್ತರಾಜ ಚರ್ಚ್ನ ಧರ್ಮಗುರುಗಳಾದ ವಂ| ಫಾ| ನೆಲ್ಸನ್ ಒಲಿವೆರಾ, ಪರಿಯಲ್ಲಡ್ಕ ಪ್ರಗತಿ ಕಾಂಪ್ಲೆಕ್ಸ್ ಮಾಲಕ ಎಚ್. ನಾರಾಯಣ ಪೂಜಾರಿ, ಪುಣಚ ಬಿಲ್ಲವ ಸಂಘ ಅಧ್ಯಕ್ಷ , ಪುಣಚ ಗ್ರಾ. ಪಂ. ನಿಕಟಪೂರ್ವ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು, ವಿಟ್ಲ ಮೂರ್ತೆದಾರರ ಸೇವಾ ಸಹಕಾರಿ ಸಂಘ(ನಿ) ಮಾಜಿ ಅಧ್ಯಕ್ಷ ಜನಾರ್ದನ ಕೆ.ಕೆ. ಭಾಗವಹಿಸಿದ್ದರು.
ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾದ ವಿಠಲ ಬೆಳ್ಚಾಡ ಚೇಳೂರು, ಅಶೋಕ್ ಪೂಜಾರಿ ಕೋಮಾಲಿ, ಜಯಶಂಕರ್ ಕಾನ್ಸಾಲೆ, ಕೆ. ಸುಜಾತ ಎಂ., ವಾಣಿವಸಂತ, ಅರುಣ್ ಕುಮಾರ್ ಎಂ. ಆಶೀಶ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಮಮತಾ ಜಿ. ಚೇಳೂರು ಸ್ವಾಗತಿಸಿದರು. ನಿರ್ದೇಶಕ ರಮೇಶ್ ಅನ್ನಪ್ಪಾಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಿಬ್ಬಂದಿ ವಿಜಯ ವಂದಿಸಿದರು. ನಿರ್ದೇಶಕ ಗಿರೀಶ್ ಕುಮಾರ್ ಪೆರ್ವ ಹಾಗೂ ಸಿಬ್ಬಂದಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.