ಬಂಟ್ವಾಳ: ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿರುವ ಸಚಿವ ಡಿ ಸುಧಾಕರ್ ರವರಿಂದ ದಲಿತ ಕುಟುಂಬ ಪ್ರಾಣಭಯದಿಂದ ಬದುಕುತ್ತಿದೆ. ಇದು ಇಡೀ ರಾಜ್ಯದಲ್ಲಿ ಇಂದಿನ ದಲಿತರ ಸ್ಥಿತಿಯ ಚಿತ್ರಣವಾಗಿದೆ. ಡಿ ಸುಧಾಕರ್ ರವರ ವಿರುದ್ಧ ದಲಿತರ ಮೇಲೆ ದೌರ್ಜನ್ಯ ಮತ್ತು ಜಾತಿ ನಿಂದನೆ ಪ್ರಕರಣದಡಿ ಎಫ್ಐಆರ್ ದಾಖಲಾಗಿದ್ದರೂ ಇದುವರೆಗೂ ಅವರ ರಾಜೀನಾಮೆ ಪಡೆಯದೆ ಇರುವುದು ಸರ್ಕಾರದ ಇಬ್ಬಂದಿ ನೀತಿಯನ್ನು ತೋರುತ್ತದೆ. ಮತ್ತು ಈ ಸರ್ಕಾರದಲ್ಲಿ ದಲಿತರ ಪ್ರಾಣ, ಮಾನಗಳಿಗೆ ಬೆಲೆ ಇಲ್ಲವೆಂಬುದು ಖಚಿತವಾಗಿದೆ. ಎಂದು ಬಂಟ್ವಾಳ ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ದಿನೇಶ್ ಅಮ್ಟೂರು ಹೇಳಿದ್ದಾರೆ.
ಸೆವೆನ್ ಹಿಲ್ಸ್ ಕಂಪನಿಯ ಪಾಲುದಾರರಾದ ಡಿ ಸುಧಾಕರ್ ರವರು ಮೋಸದಿಂದ ಯಲಹಂಕ ಗ್ರಾಮದ ಸುಬ್ಬಮ್ಮ ರವರಿಗೆ ಸೇರಿದ 108/1 ಸರ್ವೆ ನಂಬರ್ ಜಮೀನನ್ನು ಕಬಳಿಕೆ ಮಾಡಿರುವುದು ಸ್ಪಷ್ಟವಾಗಿ ದಾಖಲೆ ಸಮೇತ ತಿಳಿಯುತ್ತಿದೆ. ಈ ಜಮೀನಿನ ವಿವಾದವು ನ್ಯಾಯಾಲಯದಲ್ಲಿ ಇರುವಾಗಲೇ ಡಿ. ಸುಧಾಕರ್ ರವರು ತಮ್ಮ 40 ಜನ ಪುಡಿ ರೌಡಿಗಳನ್ನು ಕಳಿಸಿ ಆ ದಲಿತ ಕುಟುಂಬದ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಲ್ಲದೆ ಜೆಸಿಬಿಯಿಂದ ಅವರ ಮನೆಯನ್ನು ನೆಲಸಮ ಮಾಡಿದ್ದಾರೆ. ಈ ವಿಚಾರವಾಗಿ ವೈರಲ್ ಆದ ವಿಡಿಯೋ ಒಂದರಲ್ಲಿ ನಾನು ಮಚ್ಚುಗಳನ್ನು ಹಿಡಿದು ಆಂಧ್ರಪ್ರದೇಶದಲ್ಲಿ ಓಡಾಡಿರುವ ರೌಡಿ ಎಂದು ಅವರೇ ಹೇಳಿಕೊಂಡಿದ್ದಾರೆ.
ಇಂತಹ ರೌಡಿಗಳಿಗೆ ಸಚಿವ ಸ್ಥಾನ ನೀಡಿದ ಕಾಂಗ್ರೆಸ್ ಸರ್ಕಾರದಿಂದ ನಾವು ಉತ್ತಮ ಆಡಳಿತವನ್ನು ನಿರೀಕ್ಷಿಸಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಈ ಪ್ರಕರಣದಲ್ಲಿ ಡಿ. ಸುಧಾಕರ್ ರವರ ರಾಜೀನಾಮೆಯನ್ನು ಶೀಘ್ರವೇ ಪಡೆದು ಅವರನ್ನು ಕಾನೂನಾತ್ಮಕವಾಗಿ ಬಂಧಿಸಬೇಕೆಂಬುದು ನನ್ನ ಆಗ್ರಹವಾಗಿದೆ. ಕಾಂಗ್ರೆಸ್ ಸರ್ಕಾರದ ಮತ್ತೊಬ್ಬ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಸಾರ್ವಜನಿಕವಾಗಿ ಹೊಲಗೇರಿ ಎಂಬ ಜಾತಿ ನಿಂದಕ ಪದವನ್ನು ಬಳಸಿ ಸಚಿವ ಸಂಪುಟದಲ್ಲಿ ಉಳಿಯುತ್ತಾರೆ. ಈಗ ಸಚಿವ ಸಂಪುಟದ ಮತ್ತೊಬ್ಬ ಸಚಿವ ಡಿ.ಸುಧಾಕರ್ ದಲಿತರ ಮೇಲೆ ದೌರ್ಜನ್ಯ ಎಸಗಿ ಪ್ರಾಣಬೆದರಿಕೆ ಒಡ್ಡಿ ಸಚಿವ ಸಂಪುಟದಲ್ಲಿ ಉಳಿಯಬಹುದಾದರೆ ಇಂಥ ಸರ್ಕಾರದಿಂದ ದಲಿತರ ರಕ್ಷಣೆ ಸಾಧ್ಯವೇ? ಎಸ್ ಸಿ, ಎಸ್ ಪಿ / ಟಿ ಎಸ್ ಪಿ ಹಣವನ್ನು ತನ್ನ ಇಚ್ಛೆ ಬಂದಂತೆ ಬಳಸಿಕೊಳ್ಳುತ್ತಿರುವ ಈ ಸರ್ಕಾರದಿಂದ ಪರಿಶಿಷ್ಟ ಜಾತಿಯವರ ಅಭಿವೃದ್ಧಿ ಸಾಧ್ಯವೇ ? ಇಂತಹ ಆ ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರವು ಈ ರಾಜ್ಯಕ್ಕೆ ಬೇಕಾಗಿದೆಯೇ ? ಎಂದು ದಿನೇಶ್ ಅಮ್ಟೂರ್ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.