ಬಂಟ್ವಾಳ: ಬಂಟ್ವಾಳ ತಾಲೂಕಿನ ಬೊಳ್ಳಾಯಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 12 ನೇ ಶಾಖೆಯು ಕಂಬಳಬೆಟ್ಟು ದರ್ಬಾರ್ ಕಾಂಪ್ಲೆಕ್ಸ್ ನಲ್ಲಿ ರವಿವಾರ ಶುಭಾರಂಭಗೊಂಡಿತು.
ಮಾಜಿ ಸಚಿವ ಬಿ. ರಮಾನಾಥ ರೈ ಅವರು ನೂತನ ಶಾಖೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯದಂತೆ ಗ್ರಾಮೀಣ ಜನರ ಆರ್ಥಿಕ ಸಬಲೀಕರಣಕ್ಕೆ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಪೂರಕವಾಗಿದೆ. ಮೂವತ್ತು ವರ್ಷಗಳ ಹಿಂದೆ ಮೂರ್ತೆದಾರರ ಆರ್ಥಿಕತೆಯ ಉದ್ದೀಪನದ ಬೀಜವನ್ನು ಬಿತ್ತಿದ್ದ ಸಂಘದ ಅಧ್ಯಕ್ಷ ಸಂಜೀವ ಪೂಜಾರಿಯವರ ಅಂದಿನ ಕನಸು ಇಂದು ನನಸಾಗಿದೆ ಎಂದರು. ಸಂಘ ಎಲ್ಲ ಜನ ಸಮುದಾಯದ ಸಹಕಾರದಿಂದಾಗಿ ಅತ್ಯಂತ ವೇಗವಾಗಿ ಮತ್ತು ಜನಪರವಾದ ಸಹಕಾರಿ ಸಂಘವಾಗಿ ಬೆಳೆದಿದೆ ಎಂದರು. ಸಂಘ ಇನ್ನಷ್ಟು ಶಾಖೆಗಳನ್ನು ತೆರೆಯುವ ಮೂಲಕ ಯಶಸ್ವಿಯಾಗಲಿ ಎಂದು ಹಾರೈಸಿದರು.
ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಸದಸ್ಯರಿಗೆ ಶೇ. 25 ಡಿವಿಡೆಂಟ್ ನೀಡಿದ ಹೆಗ್ಗಳಿಕೆ ಹೊಂದಿದೆ. ಮಹಿಳೆಯರಿಗೆ ವಿಶೇಷ ಸಾಲದ ನೆರವು, ಆರ್ಥಿಕವಾಗಿ ತೀರಾ ಹಿಂದುಳಿದ ಮಹಿಳೆಯರಿಗೆ ಸಂಘದಲ್ಲಿ ಉದ್ಯೋಗ ನೀಡಲಾಗುತ್ತಿದೆ. ಸಂಘವು 175 ಸ್ವಸಹಾಯ ಗುಂಪುಗಳನ್ನು ರಚಿಸಿದ್ದು ಸದಸ್ಯರಿಗೆ ಅತೀ ಕಡಿಮೆ ಅವಧಿಯಲ್ಲಿ ಸಾಲವನ್ನು ನೀಡುವ ಯೋಜನೆಯನ್ನು ಹೊಂದಿದೆ. ಸೇವಾ ಕಾರ್ಯವಾಗಿ ಸಂಘದ ಸದಸ್ಯರಿಗೆ ವಿದ್ಯಾರ್ಥಿ ವೇತನ, ಕಡುಬಡತನದಲ್ಲಿರುವ ಅನಾರೋಗ್ಯ ಪೀಡಿತ ಮೂರ್ತೆದಾರರಿಗೆ ಸಹಾಯಧನ ನೀಡಲಾಗುತ್ತಿದೆ. ಪ್ರತೀವರ್ಷ ಹಿರಿಯ ಮೂರ್ತೆದಾರರನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದರು.
ಜಿ.ಪಂ. ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್ ಮಾತನಾಡಿ, ಸಹಕಾರಿಯ ಸೇವೆಯನ್ನು ಪಡೆದು ಜನರು ಅಭಿವೃದ್ದಿ ಹೊಂದಬೇಕು. ಸಂಘದ ಇನ್ನಷ್ಟು ಶಾಖೆಗಳು ಬರಲಿ ಎಂದು ಕರೆ ನೀಡಿದರು.
ವಿಟ್ಲ ಮುಡ್ನೂರು ಗ್ರಾ.ಪಂ. ಅಧ್ಯಕ್ಷ ಪುನೀತ್ ಮಾಡತ್ತಾರು ಅವರು ಸಂಘದ ಭದ್ರತಾ ಕೋಶ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಮಟ್ಟಕ್ಕೆ ಈ ಸಹಕಾರಿ ಸಂಘವು ಹೆಚ್ಚಿನ ಒತ್ತು ನೀಡುತ್ತಿದ್ದು, ಅಧ್ಯಕ್ಷರ ಸಾಧನೆ ಅಭಿನಂದನೀಯವಾಗಿದೆ ಎಂದರು. ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಸಿ.ಎಚ್. ಅವರು ಗಣಕ ಯಂತ್ರ ವ್ಯವಸ್ಥೆ ಉದ್ಘಾಟಿಸಿದರು.
ಮಾಜಿ ಅಧ್ಯಕ್ಷ ಜಯಪ್ರಕಾಶ್ ನಾಯಕ್ ಎನ್., ವಿಟ್ಲ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ಕೆ.ಕೆ. , ದರ್ಬಾರ್ ಕಾಂಪ್ಲೆಕ್ಸ್ ಮಾಲಕ ಮೊಯಿದ್ದೀನ್ ಹಾಜಿ, ಕುಂಡಡ್ಕ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಹರೀಶ್ ಪೂಜಾರಿ ಮರುವಾಳ, ಕುಂಡಡ್ಕ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ನಾರಾಯಣ ಪೂಜಾರಿ ಎಸ್.ಕೆ. ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾದ ವಿಠಲ ಬೆಳ್ಚಡ ಚೇಳೂರು, ಅಶೋಕ ಪೂಜಾರಿ ಕೋಮಾಲಿ, ಕೆ. ಸುಜಾತಾ ಮೋಹನದಾಸ., ವಾಣಿ ವಸಂತ, ಅರುಣ್ ಕುಮಾರ್ ಎಂ., ಆಶಿಶ್ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಜಿ. ಚೇಳೂರು, ಶಾಖಾಧಿಕಾರಿ ಪಲ್ಲವಿ ಲೋಕೇಶ್, ವಿವಿಧ ಶಾಖಾಧಿಕಾರಿಗಳು, ಸಿಬಂದಿವರ್ಗ, ಸ್ವಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.
ನಿರ್ದೇಶಕರಾದ ರಮೇಶ ಅನ್ನಪ್ಪಾಡಿ ಸ್ವಾಗತಿಸಿದರು. ಜಯಶಂಕರ ಕಾನ್ಸಾಲೆ ವಂದಿಸಿದರು. ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.