ಬಂಟ್ವಾಳ: ಅಕ್ರಮವಾಗಿ ಮರ ಮಟ್ಟುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇಲೆ ದಾಳಿ ಮಾಡಿದ ಬಮಟ್ವಾಳ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿ ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
7 ಲಕ್ಷ ರುಪಾಯಿ ಮೌಲ್ಯದ ವಾಹನ ಮತ್ತು ಸೊತ್ತುಗಳನ್ನು ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಮಂಗಳವಾರ ಬಿ. ಮೂಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್ ಜಂಕ್ಷನ್ ನಲ್ಲಿ ಅಕ್ರಮವಾಗಿ ವಿವಿಧ ಜಾತಿಯ ಕಟ್ಟಿಗೆಯನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ಬಂಟ್ವಾಳ ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ ಉಪವಲಯ ಅರಣ್ಯಾಧಿಕಾರಿ ಪ್ರೀತಮ್ ಎಸ್ ,ಯಶೋಧರ ,ಗಸ್ತು ಅರಣ್ಯ ಪಾಲಕರಾದ ಜಿತೇಶ್ ಪಿ., ದಯಾನಂದ ,ಶೋಭಿತ್ ,ಹಾಗೂ ಇಲಾಖಾ ವಾಹನ ಹಂಗಾಮಿ ಚಾಲಕ ಜಯರಾಮ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಪ್ರಕರಣದ ಮುಂದಿನ ತನಿಖೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟೋನಿ ಎಸ್ ಮರಿಯಪ್ಪ ಅವರ ನಿರ್ದೇಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ ಇವರ ಮಾರ್ಗದರ್ಶನದಲ್ಲಿ ವಲಯ ಅಧಿಕಾರಿ ರಾಜೇಶ್ ಬಳೆಗಾರ ಅವರು ನಡೆಸಲಿದ್ದಾರೆ.