ಬಂಟ್ವಾಳ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಸಹಯೋಗದೊಂದಿಗೆ
ಯಕ್ಷ ಧ್ರುವ – ಯಕ್ಷ ಶಿಕ್ಷಣ ಎನ್ನುವ ಯಕ್ಷಗಾನ ನಾಟ್ಯ ತರಬೇತಿ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಮಂಚಿ – ಕೊಳ್ನಾಡು ಇಲ್ಲಿ ಸಂಯೋಜನೆ ಮಾಡಲಾಯಿತು. ಯಕ್ಷಗಾನ ನಾಟ್ಯ ತರಬೇತಿ ಶಿಕ್ಷಣದ ಉದ್ಘಾಟನೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತೆ ಹಾಗೂ ಹಿರಿಯ ವಿದ್ಯಾರ್ಥಿಯಾಗಿರುವ ರೇಖಾ ಜೆ ಶೆಟ್ಟಿ ನೆರವೇರಿಸಿ ಪ್ರಸ್ತುತ ಕಾಲಘಟ್ಟದಲ್ಲಿ ಅವಕಾಶಗಳು ಹೆಚ್ಚು – ಹೆಚ್ಚು ಸೃಷ್ಟಿಯಾಗುತ್ತಾ ಇದೆ. ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿಯತ್ತ ಮುಖ ಮಾಡಿದ್ದು ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಆಸಕ್ತರಾಗಬೇಕು ಎಂದರು.
ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಸತೀಶ್ ಪಟ್ಲ ಮಾತನಾಡಿ, ಯಕ್ಷಗಾನ ಎನ್ನುವುದು ಒಬ್ಬ ವ್ಯಕ್ತಿಯಲ್ಲಿ ಸಂಸ್ಕಾರ ತುಂಬುವ ಕಲೆ. ಸರ್ವಧರ್ಮೀಯರು ಇಷ್ಟಪಡುವ ಯಕ್ಷಗಾನವು ಎಲ್ಲಾ ಜಾತಿಯ ಕಲಾವಿದರನ್ನು ಒಲಿಸಿಕೊಂಡಿದೆ. ವಿದೇಶಿಗರಿಗಿರುವ ಯಕ್ಷಗಾನದ ಮೇಲಿನ ಒಲವು ತನ್ನ ಮೇಲೆ ವಿಶೇಷವಾದ ಪ್ರಭಾವ ಬೀರಿದೆ. ಈ ಕಾರಣದಿಂದ ನಮ್ಮೂರಿನ ಸರಕಾರಿ ಶಾಲೆಯ ಮಕ್ಕಳಿಗೆ ಯಕ್ಷಗಾನ ನಾಟ್ಯ ತರಗತಿ ಅಭಿಯಾನವನ್ನು ಆರಂಭ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ತಮ್ಮ ಸುಮಧುರ ಕಂಠದಿಂದ ಹಾಡನ್ನು ಹಾಡಿ ನೆರೆದ ಎಲ್ಲರನ್ನು ರಂಜಿಸಿದರು.
ಹಿರಿಯ ವಿದ್ಯಾರ್ಥಿ ಹಾಗೂ ಯಕ್ಷಗಾನ ಕಲಾವಿದ ಪುಷ್ಪರಾಜ ಕುಕ್ಕಾಜೆ ಮಾತನಾಡಿ, ಯಕ್ಷಗಾನ ಎನ್ನುವುದು ರಾತ್ರಿ ಶಾಲೆ ಇದ್ದಂತೆ. ಶಾಲಾ ಶಿಕ್ಷಣವು ಅಕ್ಷರ ಜ್ಞಾನವನ್ನು ಕಲಿಸಿದರೆ. ಯಕ್ಷ ಶಿಕ್ಷಣವು ಒಟ್ಟು ಬದುಕಿನ ಸಿದ್ದಾಂತವನ್ನು ಕಲಿಸುತ್ತದೆ ಎಂದರು.
ಮಂಚಿ ಕೊಳ್ನಾಡು ಪ್ರೌಢಶಾಲೆಯ ಅಂದಾಜು ೮೫ ವಿದ್ಯಾರ್ಥಿಗಳು ಯಕ್ಷಗಾನ ಯಕ್ಷಧ್ರುವ ನಾಟ್ಯ ತರಬೇತಿಯಲ್ಲಿ ಪಾಲ್ಗೊಂಡಿದ್ದು ಅಶ್ವತ್ಥ್ ಮಂಜನಾಡಿ ಇವರು ಯಕ್ಷಗಾನದ ಗುರುಗಳಾಗಿ ತರಬೇತಿಯನ್ನು ನೀಡುತ್ತಿದ್ದಾರೆ. ಈ ಸಭಾ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಯದರ್ಶಿಯಾಗಿರುವ ಪುರುಷೋತ್ತಮ ಭಂಡಾರಿ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಕೊಟ್ಟಾರಿ ಇವರು ಉಪಸ್ಥಿತರಿದ್ದರು.
ಮಂಚಿ ಕೊಳ್ನಾಡು ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಸುಶೀಲಾ ವಿಟ್ಲ ವಂದಿಸಿದರು. ಕನ್ನಡ ಭಾಷಾ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರ್ವಹಿಸಿದರು.