

ಬಂಟ್ವಾಳ: ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಬಂಟ್ವಾಳ ಇದರ ವತಿಯಿಂದ ಧ್ವನಿ ಬೆಳಕು ಕುಟುಂಬ ಸಂಗಮ ಕಾರ್ಯಕ್ರಮ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದರು. ಅವರು ಮಾತನಾಡಿ ಧ್ವನಿ ಮತ್ತು ಬೆಳಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿ ವೃತ್ತಿಯಾಗಿದೆ. ಇಂದು ಈ ಒಕ್ಕೂಟದಲ್ಲಿ ಇನ್ನೂರು ಮಂದಿ ಸದಸ್ಯರಿದ್ದು ಅವರ ಮೂಲಕ ಸುಮಾರು ೨ ಸಾವಿರ ಕುಟುಂಬಗಳಿಗೆ ಈ ವೃತ್ತಿ ವರದಾನವಾಗಿದೆ, ನಾವು ಎಷ್ಟು ಹಣ ಸಂಪಾದಿಸಿದ್ದೇವೆ ಎನ್ನುವದಕ್ಕಿಂತಲೂ ನಾವು ಎಷ್ಟು ಮಂದಿಗೆ ಕೆಲಸ ನೀಡುತ್ತೇವೆಯೋ ಆ ಮೂಲಕ ನಮ್ಮ ಬೆಲೆ ಹೆಚ್ಚಾಗುತ್ತದೆ ಎಂದು ತಿಳಿಸಿದರು. ದ.ಕ. ವಿಶೇಷವಾದಂತಹ ಜಿಲ್ಲೆಯಾಗಿದೆ. ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಉತ್ಸವಗಳು, ನಿರಂತರವಾಗಿ ನಡೆಯುತ್ತಿರುತ್ತದೆ. ಇಂತಹ ಕಾರ್ಯಕ್ರಮಗಳಿಗೆ ಧ್ವನಿ ಮತ್ತು ಬೆಳಕು ಅತ್ಯಗತ್ಯ ಎಂದರು. ಹಿಂದಿನ ಕಾಲದಲ್ಲಿ ಆಟಿ ಎಂದರೆ ಕಷ್ಟದ ದಿನ, ಬಿಡುವಿನ ಕಾಲ. ಆದರೆ ಈಗ ಒಂದು ಕ್ಷಣ ಬಿಡುವಿಲ್ಲದಂತಹ ಕಾರ್ಯಕ್ರಮಗಳು ಆಟಿ ತಿಂಗಳಿನಲ್ಲೂ ನಡೆಯುತ್ತದೆ ಎಂದು ತಿಳಿಸಿದ ಅವರು ಸಂಘಟನೆಯನ್ನು ಆರಂಭಿಸಿಸುವುದು ಸುಲಭ, ಆದರೆ ಬೆಳೆಸುವುದು ಕಷ್ಟ. ಭಿನ್ನಾಭಿಪ್ರಾಯಗಳನ್ನು ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಸಂಘಟನೆ ಬಲಯುತವಾಗಲು ಸಾಧ್ಯವಿದೆ ಎಂದರು.

ಒಕ್ಕೂಟದ ಕಾನೂನು ಸಲಹೆಗಾರ, ವಕೀಲ ಜಯರಾಮ ರೈ ಪಿ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಂಘಟನೆಯಲ್ಲಿದ್ದಾಗ ಮಾತ್ರ ವ್ಯಕ್ತಿಗೆ ಬೆಲೆ ಸಿಗುತ್ತದೆ. ನಮಗ್ಯಾಕೆ ಸಂಘಟನೆ, ನಮಗೇನು ಲಾಭ ಎಂದು ಪ್ರಶ್ನಿಸುವ ಬದಲು ಸಂಘಟನೆಯ ಜೊತೆ ಇದ್ದಾಗ ಅದು ನಮ್ಮ ಸಂಕಷ್ಟದ ಸಮಯದಲ್ಲಿ ನೆರವಾಗುತ್ತದೆ ಎಂದರು.
ಒಕ್ಕೂಟದ ಬಂಟ್ವಾಳ ತಾಲೂಕು ಅಧ್ಯಕ್ಷ ಧನರಾಜ ಶೆಟ್ಟಿ ಫರಂಗಿಪೇಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೋವಿಡ್ ಸಮಯದಲ್ಲಿ ಧ್ವನಿ ಬೆಳಕು ವೃತ್ತಿಯಲ್ಲಿ ತೊಡಗಿಸಿಕೊಂಡವರು ಸಾಕಷ್ಟು ಕಷ್ಟ ನಷ್ಟ ಅನುಭವಿಸಿದ್ದಾರೆ, ಈ ಕೆಲಸ ಬಿಟ್ಟು ಕೂಲಿ ಕೆಲಸವನ್ನೂ ಮಾಡಿದವರಿದ್ದಾರೆ. ಆದರೆ ಇಂದು ಸಂಘಟನೆ ಬಲಿಷ್ಠವಾಗಿದ್ದು 70ಮಂದಿ ಇದ್ದ ಸದಸ್ಯರ ಸಂಖ್ಯೆ 200ಕ್ಕೇರಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಸತೀಶ್ ಸುವರ್ಣ, ರಾಜೇಶ್ ಗೌಡ, ಮೇಜರ್ ಬಾಲಕೃಷ್ಣ ರೈ ಅವರನ್ನು ಗೌರವಿಸಲಾಯಿತು. ಧ್ವನಿ ಬೆಳಕು ಹಿರಿಯ ಸಂಯೋಜಕರನ್ನು ಹಾಗೂ ಸಂಘದ ಅಧ್ಯಕ್ಷ ಧನರಾಜ್ ಶೆಟ್ಟಿ ಫರಂಗಿಪೇಟೆ ಹಾಗೂ ಕಾರ್ಯದರ್ಶಿ ಸಂತೋಷ್ ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಫರಂಗಿಪೇಟೆ ಹನುಮಾನ್ ದೇವಸ್ಥಾನದ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ, ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಧ್ವನಿವರ್ದಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ್ ಶೆಟ್ಟಿ, ಸುಪ್ರೀ ಡೆಕೋರೇಟರ್ಸ್, ಲೈಟಿಂಗ್ಸ್ ಮತ್ತು ಸೌಂಡ್ ಸಿಸ್ಟಮ್ ನ ಮೂಸ, ಧ್ವನಿ ಮತ್ತು ಬೆಳಕು ಮಾಲಕರ ಸಂಘ ಮಂಗಳೂರು ತಾಲೂಕು ಅಧ್ಯಕ್ಷ ಬೆನೆಟ್ ಡಿಸಿಲ್ವಾ, ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಪುತ್ತೂರು ಶ್ಯಾಮ್ ಮಂಜುನಾಥ ಪ್ರಸಾದ್, ಧ್ವನಿವರ್ಧಕ ಮತ್ತು ದೀಪಾಲಂಕರ ಮಾಲಕರ ಸಂಘ
ಬೆಳ್ತಂಗಡಿ ಇದರ ಅಧ್ಯಕ್ಷ ಚಂದ್ರಶೇಖರ್ ಎಂ. ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಇದರ ಅಧ್ಯಕ್ಷ ಶಿವಪ್ರಕಾಶ್, ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೋಶಾಧಿಕಾರಿ ಇಸ್ಮಾಯಿಲ್ ಬನಾರಿ ಸ್ವಾಗತಿಸಿದರು, ಸದಸ್ಯ ಲೋಹಿತ್ ವಂದಿಸಿದರು. ಮಹೇಶ್ ಕುಲಾಲ್ ಕಡೇಶಿವಾಲಯ ಕಾರ್ಯಕ್ರಮ ನಿರೂಪಿಸಿದರು. ಮನೋರಂಜನಾ ಕಾರ್ಯಕ್ರಮದಂಗವಾಗಿ ವಿವಿಧ ವಿನೋಧಾವಳಿಗಳು, ಡ್ಯಾನ್ಸ್ ವೈಭವ, ಸಂಗೀತ ರಸ ಮಂಜರಿ ನಡೆಯಿತು.