ಬಂಟ್ವಾಳ: ಬೆಂಗಳೂರಿನ ದೇವನಹಳ್ಳಿಯ ವಿಜಯಪುರದ ಅನ್ನಪೂರ್ಣ ಕನ್ವೇನ್ಶನ್ ಸಭಾಂಗಣದಲ್ಲಿ ಆ.12 ಮತ್ತು 13 ರಂದು ನಡೆಯುತ್ತಿರುವ ಪ್ರಥಮ ಮುಕ್ತ ರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್ಶಿಪ್ ವಾರಿಯರ್ಸ್ ಕಪ್-2023 ಸ್ಪರ್ಧೆಯ ಕಟಾ ವಿಭಾಗದಲ್ಲಿ ದ.ಕ. ಜಿಲ್ಲೆಯ ಇಬ್ಬರು ಪ್ರತಿಭೆಗಳು ಚಿನ್ನದ ಪದಕ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮಂಗಳೂರಿನ ನಂದಾದೀಪಾ ಅಪಾರ್ಟ್ಮೆಂಟ್ನ ನಿವಾಸಿಗಳಾದ ನಕುಲ್ ತಿಲಕ್ ಹಾಗೂ ಸುರಶ್ರೀ ಅವರ ಪುತ್ರ, ಮಂಗಳೂರಿನ ಸಂತ ಅಲೋಷಿಯಸ್ ಗೋನ್ಞಾಗ ವಿದ್ಯಾಸಂಸ್ಥೆಯ ಯುಕೆಜಿ ವಿದ್ಯಾರ್ಥಿ ಶ್ರೀಹಾನ್ ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಫೈಟ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾನೆ. ಈತ ನಂದಾದೀಪಾ ಅಪಾರ್ಟ್ಮೆಂಟ್ನಲ್ಲಿ ಮಾರ್ಷಲ್ಆರ್ಟ್ ತರಬೇತುದಾರರಾದ ರಾಜೇಶ್ ಬ್ರಹ್ಮರಕೂಟ್ಲು ಹಾಗೂ ವೆನ್ನಿಲ್ಲಾ ಮಣಿಕಂಠ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾನೆ.
ನೆತ್ತರಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಹಂಸಿಕಾ ವೈಯಕ್ತಿಕ ವಿಭಾಗದ ಕಟಾದಲ್ಲಿ ಚಿನ್ನದ ಪದಕ ಹಾಗೂ ಫೈಟ್ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಈಕೆ ರಾಜೇಶ್ ಹಾಗೂ ಶೋಭಾ ದಂಪತಿಯ ಪುತ್ರಿಯಾಗಿದ್ದು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಮಾರ್ಷಲ್ ಆರ್ಟ್ ತರಬೇತುದಾರರಾದ ಅಸ್ಮಿತಾ ರೈ ಅವರಿಂದ ಮಿಕ್ಸೆಡ್ ಮಾರ್ಷಲ್ ಆರ್ಟ್ ತರಬೇತಿಯನ್ನು ಪಡೆಯುತ್ತಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಾಚೈತನ್ಯಾನಂದ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.