ಬಂಟ್ವಾಳ: ಸಮಾಜದ ರಕ್ಷಣೆ ಮಾಡುತ್ತೇವೆಂದು ನೈತಿಕ ಗೂಡಂಗಿರಿ ಮಾಡುವ ಪ್ರವೃತ್ತಿ ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಸೇರಿದ ವ್ಯಕ್ತಿಗಳಿಂದ ನಡೆಯುತಿದ್ದು ಇದನ್ನು ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಖಂಡಿಸುವುದಾಗಿ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮನಾಥ ರೈ ಹೇಳಿದರು.
ಬುಧವಾರ ಬಿ.ಸಿ.ರೋಡಿನಲ್ಲಿರುವ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಇಂತಹ ಕೃತ್ಯ ಎಸಗುವವರ ವಿರುದ್ದ ಪೊಲೀಸರು ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ತಾಲೂಕಿನ ವಿಟ್ಲದಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಸರಣಿ ಸಾಮೂಹಿಕ ಅತ್ಯಾಚಾರ, ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯನ್ನು ಅದೇ ಕಾಲೇಜಿನ ಎಬಿವಿಪಿ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ವಾಹನದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ಉದ್ದೇಶಪೂರ್ವಕವಾಗಿ ವೀಡಿಯೋ ಚಿತ್ರೀಕರಣ ನಡೆಸಿ ವೈರಲ್ ಮಾಡಿದ ಘಟನೆ, ಬಂಟ್ವಾಳದಲ್ಲಿ ಪೊಲೀಸ್ ಸಿಬ್ಬಂದಿಯ ಕುಟುಂಬದ ಮೇಲೆ ನೈತಿಕ ಗೂಂಡಾಗಿರಿ, ಮಂಗಳೂರಿನಲ್ಲಿ ಪತ್ರಕರ್ತರ ಮೇಲೆ ಗೂಂಡಾಗಿರಿ ಮೆರೆದ ಘಟನೆಯನ್ನು ಖಂಡಿಸುವ ಧೈರ್ಯವನ್ನು ಬಿಜೆಪಿ ಮುಖಂಡರು ತೋರುತ್ತಿಲ್ಲ, ಈ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ. ಅಧಿಕಾರದ ಅಹಂ ಕೆಲವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬಿರುವ ಡ್ರಗ್ಸ್ ಮಾಫಿಯಾ ವಿರುದ್ಧವೂ ಬಂಟ್ವಾಳದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಅಭಿಯಾನವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು ಎಂದ ರಮಾನಾಥ ರೈ ಸಮಾಜದಲ್ಲಿ ನಡೆಯುತ್ತಿರುವ ಸಮಾಜದ್ರೋಹಿ ಕೃತ್ಯಗಳಿಗೆ ಡ್ರಗ್ಸ್ ವ್ಯಸನ ಕೂಡಾ ಕಾರಣವಾಗುತ್ತಿರುವ ಹಿನ್ನಲೆಯಲ್ಲಿ ಡ್ರಗ್ಸ್ ಪೆಡ್ಲರ್ ಗಳು ಹಾಗೂ ವ್ಯಸನಿಗಳ ವಿರುದ್ಧವೂ ಪೊಲೀಸ್ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಸದಾಶಿವ ಬಂಗೇರ, ಬಿ.ಎಂ. ಅಬ್ಬಾಸ್ ಅಲಿ, ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಜೋರಾ, ಮಹಮ್ಮದ್ ಶರೀಫ್, ಬಾಲಕೃಷ್ಣ ಆಳ್ವ ಮೊದಲಾದವರು ಉಪಸ್ಥಿತರಿದ್ದರು.