ಬಂಟ್ವಾಳ: ಅಲ್ಲಿ ಪ್ರಾರ್ಥನೆ ಇತ್ತು. ಅರ್ಚಕರಿರಲಿಲ್ಲ. ಮಹಾಸಭೆ ನಡೆಯಿತು, ಅಧಿಕಾರಿಗಳಾರೂ ಇರಲ್ಲಿಲ್ಲ. ತಾಯಂದಿರ ಪ್ರೀತಿ ಇತ್ತು, ಅವರೆಲ್ಲಾ ಒಂದೇ ಮನೆಯವರಾಗಿರಲ್ಲಿಲ್ಲ… ನಾನು ಎಲ್ಲರಿಗಾಗಿ, ಎಲ್ಲರೂ ನನಗಾಗಿ ಎಂಬ ನಿಷ್ಕಲ್ಮಶ ಅಂತ:ಕರಣದ ಜನರು, ಮನೊಲ್ಲಾಸದ ವಾತಾವರಣ. ಮನೋರಂಜನೆಯ ಆಟಗಳು! ಮಕ್ಕಳ ಜೊತೆ ಮಕ್ಕಳಾಗಿ ಕುಣಿದ ಹಿರಿಯರು, ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ತಮ್ಮ ಮನೆಗಳಿಂದ ತಂದ ಅಪರೂಪದ ತಿಂಡಿಗಳಿದ್ದವು ಜೊತೆಗೆ ತನ್ನವರಿಗೆ ಹಂಚುವ ಮಧುರ ಭಾವನೆಗಳು ಅಲ್ಲಿ ತುಂಬಿದ್ದವು…
ಇದು ಪೊಯಿಲೋಡಿ ಕುಟುಂಬಿಕರ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳು. ಕುಟುಂಬ ಪದ್ದತಿ ದೂರವಾಗಿ ವಿಭಕ್ತ ಕುಟುಂಬಗಳೇ ತುಂಬಿಕೊಂಡಿರುವ ಈ ಕಾಲಘಟ್ಟದಲ್ಲಿ ಕುಟುಂಬಿಕರನ್ನು ಜೊತೆ ಸೇರಿಸಲು ಹೀಗೂ ಕಾರ್ಯಕ್ರಮ ಆಯೋಜಿಸಬಹುದು ಎನ್ನುವುದಕ್ಕೆ ಕುಟುಂಬ ಸಮ್ಮಿಲನ ಕಾರ್ಯಕ್ರಮ ಸಾಕ್ಷಿಯಾಯಯಿತು.
ಪೊಯಿಲೋಡಿ ಬಂಜನ್ ಕುಟುಂಬಸ್ಥರ ದೈವಗಳ ಸೇವಾ ಟ್ರಸ್ಟ್ ವತಿಯಿಂದ ವಾರ್ಷಿಕ ಸಭೆ ಮತ್ತು ಕುಟುಂಬ ಸಮ್ಮಿಲನ-23 ಕಾರ್ಯಕ್ರಮ ಭಾನುವಾರ ಬಂಟ್ವಾಳ ನಾವೂರಿನ ಪೊಯಿಲೋಡಿ ಮನೆಯಲ್ಲಿ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಬಹಳ ಅರ್ಥಪೂರ್ಣವಾಗಿ ಜರಗಿತು. ಕುಟುಂಬಸ್ಥರು ಹಾಗೂ ನೆಂಟರಿಷ್ಟರು ಬಹಳ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು. ಬೆಳಗ್ಗೆ ಎಂದಿನಂತೆ(ತಿಂಗಳ) ಸಂಕ್ರಮಣ ಪೂಜೆ ನಡೆದು ನಂತರ ವಾರ್ಷಿಕ ಸಭಾ ಕಾರ್ಯಕ್ರಮ ಜರಗಿತು. ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಅನುಮೋದನೆಗೊಂಡ ನಂತರ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಸಭಿಕರಿಗೆ ವಿವಿಧ ಸಾಂಸ್ಕ್ರತಿಕ ಮತ್ತು ಮನೋರಂಜನಾ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ನೀಡಲಾಯಿತು. ಕುಟುಂಬ ಮನೆ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಕುಟುಂಬ ಸದಸ್ಯರಿಗೆ ಸ್ಮರಣಿಕೆಯನ್ನಿಟ್ಟು ಗೌರವಿಸಲಾಯಿತು. ಕುಟುಂಬಿಕರು ಅವರವರ ಮನೆಯಲ್ಲೇ ತಯಾರಿಸಿ ತಂದ ಬಗೆ ಬಗೆಯ ತಿಂಡಿ ತಿನಸುಗಳನ್ನು ಜತೆಯಾಗಿ ಸೇವಿಸಿ ಸಂಭ್ರಮಿಸಿರುವುದು ಕಾರ್ಯಕ್ರಮದ ವೈಶಿಷ್ಟ್ಯತೆ. ಸುಮಾರು 40ಕ್ಕಿಂತಲೂ ಅಧಿಕ ತಿಂಡಿ ತಿನಸುಗಳು ಎಲ್ಲರ ಮನ ಗೆದ್ದಿತು. ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಾಜೇಶ್ ಮುರುವ ಸ್ವಾಗತಿಸಿ, ಕೋಶಾಧಿಕಾರಿ ಪ್ರವೀಣ್ ಬಂಜನ್ ವಂದಿಸಿದರು. ಗೌರವಾಧ್ಯಕ್ಷ ಪೊಯಿಲೋಡಿ ನಾರಾಯಣ ಮೂಲ್ಯ ಶುಭ ಹಾರೈಸಿದರು. ಟ್ರಸ್ಟ್ ಉಪಾಧ್ಯಕ್ಷರಾದ ಆನಂದ ಬಂಜನ್ ಕೃಷ್ಣಾಪುರ , ಲಿಂಗಪ್ಪ ಮುರುವ , ಪದಾಧಿಕಾರಿಗಳಾದ ನಾರಾಯಣ ಮುರುವ, ಸಂಜೀವ ಬೆರ್ಬಳ್ಳಿ, ಹರೀಶ್ ವೇಣೂರು, ಟ್ರಸ್ಟ್ ಸದಸ್ಯರುಗಳಾದ ತಿಮ್ಮಪ್ಪ ಮುರುವ, ವಸಂತ ಅಡ್ಡೂರು, ಮೋಹನ್ ಕುಳಾಯಿ, ಚಿದಾನಂದ ವೇಣೂರು ಉಪಸ್ಥಿತರಿದ್ದರು. ಸುಮಾರು ಇನ್ನೂರಕ್ಕೂ ಅಧಿಕ ಮಂದಿ ಕುಟುಂಬಿಕರು, ನೆಂಟರಿಷ್ಟರು, ಹಿತೈಷಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಹೊಸ ಪೀಳಿಗೆಗೆ ಕುಟುಂಬದ ಆಗು ಹೋಗುಗಳ ಪರಿಚಯ, ಧಾರ್ಮಿಕ ಪ್ರಜ್ಞೆ ಮೂಡಲು ಸಹಕಾರಿಯಾಯಿತು. ಕೆಲವರ ಯೋಚನೆ, ಹಲವರ ಯೋಜನೆ, ನೂರಾರು ಜನರ ಸಹಕಾರದಿಂದ ಪೊಯಿಲೊಡಿಯ ಬಂಜನ್ ಕುಟುಂಬಿಕರ ಮನೆ ಭಕ್ತಿ ಮತ್ತು ಭಾವೈಕ್ಯದಕೇಂದ್ರವಾಯಿತು.