ಬಂಟ್ವಾಳ: ೧೮ ವರ್ಷಗಳ ಕಾಲ ರಾಜ್ಯಸಭಾ ಸದಸ್ಯರಾಗಿ, ೪೯ ವರ್ಷ ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿರುವ ಕಾಂಗ್ರೆಸ್ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ಕಾಂಗ್ರೆಸ್ ಪಕ್ಷದಲ್ಲಿ ನಡೆದಿದೆ. ಜನಾರ್ದನ ಪೂಜಾರಿಯವರನ್ನು ಮೂಲೆ ಗುಂಪು ಮಾಡಿದಂತೆ ಬಿ.ಕೆ ಹರಿಪ್ರಸಾದ್ ಅವರನ್ನು ಕಡೆಗಣಿಸುತ್ತಿರುವುದು ಕಾಣುತ್ತಿದೆ. ಬಿ.ಕೆ. ಹರಿಪ್ರಸಾದ್ ಅವರಿಗೆ ತಕ್ಷಣ ಸೂಕ್ತ ಸ್ಥಾನಮಾನ ನೀಡಬೇಕು ತಪ್ಪಿದ್ದಲ್ಲಿ ಮುಂಬರುವ ತಾ.ಪಂ. ಜಿ.ಪಂ. ಕಾಪೋರೇಷನ್ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತಕ್ಕ ಬೆಲೆ ತೆರಲಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಡಾ. ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಬಂಟ್ವಾಳದ ಮೆಲ್ಕಾರ್ನ ಬಿರ್ವ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಬಿ.ಕೆ. ಹರಿಪ್ರಸಾದ್ ಅವರ ಬೆನ್ನೆಲುಬಾಗಿ ಬಿಲ್ಲವ ಸಮಾಜ ನಿಲ್ಲಲಿದೆ. ಈಗ ಸರಕಾರ ಹನಿಮೂನ್ ಪಿರೇಡ್ನಲ್ಲಿದ್ದು ಅದು ಮುಗಿದ ಕೂಡಲೇ ಸೂಕ್ತ ಸ್ಥಾನ ಮಾನ ನೀಡಿಬೇಕು, ಇಲ್ಲದೇ ಹೋದಲ್ಲಿ ಸಮುದಾಯ ಬೀದಿಗಿಳಿಯುವುದು ನಿಶ್ವಿತ ಎಂದರು. ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಬ್ರಹ್ಮಶ್ರೀ ನಾರಾಯಣ ಗುರು ನಿಗಮಕ್ಕೆ ೨೫೦ ಕೋಟಿ ರೂಪಾಯಿ ಅನುದಾನ ಒದಗಿಸಬೇಕು, ಅಧಕ್ಷ ಹಾಗೂ ಪದಾಧಿಕಾರಿಗಳ ನೇಮಕ ಮಾಡಬೇಕು, ವಿಧಾನಸೌಧದ ಮುಂಭಾಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ಸ್ಥಾಪಿಸಬೇಕು. ಬಿಲ್ಲವರು ಹಾಗೂ ಈಡಿಗರ ಕುಲ ಕುಸಬಾಗಿರುವ ನೀರಾ ಹಾಗೂ ಶೇಂದಿ ಇಳಿಸುವ ಕಾಯಕಕ್ಕೆ ಸರಕಾರ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು, ಬಿಲ್ಲವರ ಕುಲಶಾಸ್ತ್ರೀಯ ಅಧ್ಯಯನವನ್ನು ಮಂಗಳೂರು ವಿಶ್ವವಿದ್ಯಾನಿಲಯದ ನಾರಾಯಣ ಗುರು ಅಧ್ಯಯನ ಪೀಠಕ್ಕೆ ನೀಡಬೇಕು ಎಂದು ಆಗ್ರಹಿಸಿದರು.
ದ. ಕ ಜಿಲೆಯ ರಾಷ್ಟ್ರೀಯ ಈಡಿಗ ಬಿಲ್ಲವ ಮಹಾಮಂಡಳಿಯ ಚಿಂತನ ಶಿಬಿರ ಶನಿವಾರ ಬಿರ್ವ ಸಭಾಂಗಣದಲ್ಲಿ ನಡೆದಿದ್ದು ಈ ಸಂದರ್ಭ ಸಾಕಷ್ಟು ಚರ್ಚೆಗಳು ನಡೆದಿದ್ದು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಬಹುಸಂಖ್ಯಾತರಾಗಿರುವ ಬಿಲ್ಲವರಿಗೆ ಪದೇ ಪದೇ ರಾಜಕೀಯ ಕ್ಷೇತ್ರದಲ್ಲಿ ಹಿನ್ನಡೆಯಾಗುತ್ತಿದೆ. ಸರ್ವಪಕ್ಷದಲ್ಲಿರುವ ಬಿಲ್ಲವ ರಾಜಕೀಯ ಮುಖಂಡರ ಅಲಕ್ಷ್ಯ ಮನೋಭಾವನೆ ಇದಕ್ಕೆ ಕಾರಣ, ಜನಾರ್ದನ ಪೂಜಾರಿಯವರಿಗೆ ಆರೋಗ್ಯ ಸಮಸ್ಯೆ ಬಂದ ಬಳಿಕ ಸಮುದಾಯ ಅನಾಥವಾಗಿದೆ. ಹಳ್ಳಿ ಹಳ್ಳಿಯಲ್ಲಿ ಬಿಲ್ಲವ ಸಂಘಟನೆಗಳು ಇದ್ದು ವಾರ್ಷಿಕ ಸಭೆ, ನಾರಾಯಣ ಗುರು ಜನ್ಮದಿನಾಚರಣೆ ಮಾಡುತ್ತಿದ್ದರೂ ರಾಜಕೀಯ ಶಕ್ತಿಯಾಗಿ ಬೆಲೆಯಲು ಸಾಧ್ಯವಾಗಿಲ್ಲ ಎನ್ನುವ ಚರ್ಚೆ ಈ ಸಭೆಯಲ್ಲಿ ನಡೆದಿದೆ ಎಂದರು. ಮಂಗಳೂರಿನ ಎಂಟು ವಿಧಾನಸಭಾ ಕ್ಷೇತ್ರದ ಪೈಕಿ ಆರು ಕ್ಷೇತ್ರದಲ್ಲಿ ಅತ್ಯಧಿಕ ಮತಗಳನ್ನು ಬಿಲ್ಲವ ಸಮುದಾಯ ಹೊಂದಿದರೂ ನಮಗಿಂತಲೂ ಸಣ್ಣ ಸಮುದಾಯಕ್ಕೆ ಚುನಾವಣೆಯಲ್ಲಿ ಮೂರು ನಾಲ್ಕು ಸೀಟುಗಳನ್ನು ರಾಜಕೀಯ ಪಕ್ಷಗಳು ನೀಡಿದೆ ಆದರೆ ಬಿಲ್ಲವ ಸಮಾಜವನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಕಾಣುತ್ತಿದೆ ಗ್ರಾಮ ಮಟ್ಟದಲ್ಲಿ ಬಿಲ್ಲವರ ಮನೆ ಮನೆ ಭೇಟಿ ಕಾರ್ಯಕ್ರಮ, ತಾಲೂಕು ಮಟ್ಟದಲ್ಲಿ ಚಿಂತನಾ ಸಭೆ ನಡೆಸುವ ಮೂಲಕ ಸಮಾಜವನ್ನು ಜಾಗೃತಿಗೆ ತರುವ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.
ಮೈಸೂರು, ಚಾಮರಾಜ ನಗರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಪ್ರಬಲವಾಗಿದೆ. ಈ ಪಕ್ಷದ ಹಿನ್ನಲೆಯಲ್ಲಿ ಒಕ್ಕಲಿಗರಿದ್ದಾರೆ. ಮಂಗಳೂರಿನಲ್ಲಿ ಒಂಭತ್ತು ಲಕ್ಷ, ಉಡುಪಿಯಲ್ಲಿ ಮೂರು ಲಕ್ಷ , ಕಾರವಾರದಲ್ಲಿ ೫ ಲಕ್ಷ, ಶಿವಮೊಗ್ಗ ಜಿಲೆಯಲ್ಲಿ ೫ ಲಕ್ಷ ಬಿಲ್ಲವರು, ಈಡಿಗರು, ನಾಮಧಾರಿಗಳು, ದೀವರು ಇದ್ದರೂ ಇಲ್ಲಿರುವ ೨೨ ಮತ ಕ್ಷೇತ್ರಗಳಲ್ಲಿ ಬಹುಸಂಖ್ಯೆಯಲ್ಲಿರುವ ಬಿಲ್ಲವರನ್ನು ಕಡೆಗಣಿಸಲಾಗಿದೆ. ಇದೇ ರೀತಿ ಕಡೆಗಣಿಸಿದ್ದಲ್ಲಿ ಸ್ವತಂತ್ರ ಪಕ್ಷ ಸ್ಥಾಪಿಸಲು ಬಿಲ್ಲವ ಸಮುದಾಯ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮಾಜ ಸಾಮರಸ್ಯ ಕದಡುವ ಚಟುವಟಿಕೆಯಲ್ಲಿ ಬಿಲ್ಲವ ಯುವಕರು ಭಾಗವಹಿಸಬಾರದು, ಬಿಲ್ಲವ ಯುವಕರ ಹೆಸರು ರೌಡಿ ಶೀಟ್ನಲ್ಲಿ ಕಾಣಬಾರದು ಬದುಕನ್ನು ದ್ವೇಷದ ರಾಜಕಾರಣದಲ್ಲಿ ಹಾಳು ಮಾಡಿಕೊಳ್ಳಬಾರದು ಎಂದು ಬಿಲ್ಲವ ಯುವ ಸಮುದಾಯಕ್ಕೆ ಕಿವಿ ಮಾತು ಹೇಳಿದರು. ಮಂಗಳೂರು ಉಡುಪಿಯಲ್ಲಿ ಬಿಲ್ಲವ ಸಮಾಜ ಎಚ್ಚೆತ್ತುಕೊಳ್ಳಬೇಕು ಕೆಲವೊಂದು ರಾಜಕೀಯ ನಾಯಕರು ಬಿಲ್ಲವರನ್ನು ಅಡಿಯಾಳನ್ನಾಗಿ ಮಾಡಿಕೊಂಡಿದೆ. ನಾವು ಅಡಿಯಾಳುಗಳಲ್ಲ, ನಾಯಕರಾಗಿ ಬೆಳೆಯಬೇಕು, ಸಮಾಜ ಒಗ್ಗೂಡುವ ದೃಷ್ಟಿಯಲ್ಲಿ ಕೆಲಸ ಮಾಡಬೇಕು ಎಂದರು. ಮಹಾಮಂಡಳಿಯ ರಾಜ್ಯ ಉಪಾಧ್ಯಕ್ಷ ಜಿತೇಂದ್ರ ಜೆ. ಸುವರ್ಣ, ಜಿಲ್ಲಾ ಗೌರವಾಧ್ಯಕ್ಷ ಸಂಜೀವ ಪೂಜಾರಿ, ಜಿಲ್ಲಾಧ್ಯಕ್ಷ ಸುರೇಶ್ಚಂದ್ರ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಟಿ. ಶಂಕರ್ ಸುವರ್ಣ, ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ, ಸತೀಶ್ ಉಪಸ್ಥಿತರಿದ್ದರು.
—