ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯದಿಂದ ಅಂಗೀಕೃತವಾದ ದೇಶದ ಮೊತ್ತ ಮೊದಲ ಕೇಶ ವಿನ್ಯಾಸ ಕಾಲೇಜು ಆಗಸ್ಟ್ನಲ್ಲಿ ಮಂಗಳೂರಿನ ದೇರಳಕಟ್ಟೆಯಲ್ಲಿ ಶಿವಾ’ಸ್ ಕಾಲೇಜ್ ಹೆಸರಲ್ಲಿ ಕಾರ್ಯಾರಂಭಗೊಳ್ಳಲಿದೆ. ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಮತ್ತು ಒಂದು ವರ್ಷ ಡಿಪ್ಲೊಮ ಪೂರೈಸಿದ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯ ಪ್ರಮಾಣೀಕೃತ ಸರ್ಟಿಫಿಕೇಟ್ ಸಿಗಲಿದೆ.
ಬಹು ಬೇಡಿಕೆಯಿರುವ ಕೇಶ ವಿನ್ಯಾಸ ಕ್ಷೇತ್ರದಲ್ಲಿ ಯುವ ಸಮುದಾಯಕ್ಕೆ ಉದ್ಯೋಗವಕಾಶ ಒದಗಿಸುವ ಉದ್ದೇಶದೊಂದಿಗೆ ಈ ಕಾಲೇಜು ಆರಂಭಗೊಂಡಿದ್ದು, ಕೇಶ ವಿನ್ಯಾಸ ಕ್ಷೇತ್ರದಲ್ಲಿ ಹೊಸ ಪರಿಕಲ್ಪನೆಯೊಂದಿಗೆ ಹೊಸ ಮೈಲುಗಲ್ಲು ಸಾಧಿಸಿದ, ಮೂಲತಃ ಕಾರ್ಕಳ ಅತ್ತೂರು ನಿವಾಸಿ, ಮುಂಬೈಯ ಯಶಸ್ವಿ ಉದ್ಯಮಿ ಶಿವಾ’ಸ್ ಸಂಸ್ಥೆಯ ಸಂಸ್ಥಾಪಕ ಡಾ. ಶಿವರಾಮ ಕೆ. ಭಂಡಾರಿ ನೂತನ ಶಿವಾ’ಸ್ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಇನ್ನೋವೇಶನ್ಸ್ (ಸೀಪಿ) ಕಾಲೇಜು ಸ್ಥಾಪನೆಯ ರೂವಾರಿ ಆಗಿದ್ದಾರೆ.
ಸರ್ಟಿಫಿಕೇಟ್ ಪ್ರೋಗ್ರಾಂ ಕೋರ್ಸ್:
ಮುಂಬೈಯಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಪ್ರತಿಷ್ಠಿತ ಶಿವಾಸ್ ಸಂಸ್ಥೆ, ಮೌಲ್ಯವರ್ಧಿತ ಮತ್ತು ಕೌಶಲ್ಯವರ್ಧಿತ ಹೇರ್ ಎಂಡ್ ಬ್ಯೂಟಿ ಥೆರಪಿ (ಸರ್ಟಿಫಿಕೆಟ್ ಪ್ರೋಗ್ರಾಮ್ ಇನ್ ಹೇರ್ ಆಂಡ್ ಬ್ಯೂಟಿ ಥೆರಪಿ) ಎನ್ನುವ ಆರು ತಿಂಗಳ ಸರ್ಟಿಫಿಕೆಟ್ ಕೋರ್ಸ್ ಮತ್ತು ಡಿಸೈನಿಂಗ್ ಎಂಡ್ ಟ್ರೀಟಿಂಗ್ ಹೇರ್ ಎನ್ನುವ ಒಂದು ವರ್ಷದ ಡಿಪ್ಲೋಮಾ ಕೋರ್ಸನ್ನು ಮಂಗಳೂರಿನಲ್ಲಿ ಆರಂಭಿಸಲಿದೆ. ಕೋರ್ಸ್ ಪೂರ್ತಿಗೊಂಡ ಬಳಿಕ ವಿದ್ಯಾರ್ಥಿಗೆ ಮಂಗಳೂರು ವಿವಿ ಮಾನ್ಯತೆಯಿರುವ ಪ್ರಮಾಣಪತ್ರವೂ ಸಿಗಲಿದೆ. ಕೇಶ ವಿನ್ಯಾಸ ಕೇತ್ರದಲ್ಲಿ ಕೋರ್ಸ್ ಪೂರೈಸಿದ ವಿದ್ಯಾರ್ಥಿಗೆ ವಿಶ್ವವಿದ್ಯಾನಿಲಯವೊಂದು ಸರ್ಟಿಫಿಕೇಟ್ ನೀಡುವುದು ರಾಷ್ಟ್ರದಲ್ಲೇ ಪ್ರಥಮ ಹೆಜ್ಜೆಯಾಗಿದೆ ಇದು ಸಂಸ್ಥೆಗೂ ಹೆಮ್ಮೆಯ ವಿಚಾರ. ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಸಂಚಾಲಕತ್ವದಲ್ಲಿ ಮಂಗಳೂರು ದೇರಳಕಟ್ಟೆಯ ಪ್ಲಾಮಾ ನೆಸ್ಟ್ ಕಟ್ಟಡದಲ್ಲಿ ಆಗಸ್ಟ್ ತಿಂಗಳಿನಿಂದ ಕಾಲೇಜು ಕಾರ್ಯಾರಂಭಗೊಳ್ಳಲಿದೆ.
ದ್ವಿತೀಯ ಪಿಯೂಸಿ ಪಾಸಾದ ಅಥವಾ ಉನ್ನತ ಶಿಕ್ಷಣ ಪಡೆದ ಯುವಕ ಯುವತಿಯರು ಈ ಕೋರ್ಸ್ ಮಾಡಬಹುದಾಗಿದ್ದು ಕೇಶ ವಿನ್ಯಾಸ ಕ್ಷೇತ್ರದಲ್ಲಿ ಉದ್ಯೋಗ ಮಾಡುವವವರು ಅಥವಾ ಸ್ವ ಉದ್ಯೋಗ ಮಾಡಲಿಚ್ಛಿಸುವವರಿಗೆ ಈ ಕಾಲೇಜು ಪ್ರಯೋಜನಕಾರಿಯಾಗಲಿದೆ, ಪ್ರಧಾನಿ ಕನಸಿನ ಯೋಜನೆಯಂತೆ ರಾಷ್ಟ್ರೀಯ ಶಿಕ್ಷಣ ನೀತಿಗೂ ಪೂರಕವಾಗಿದೆ.
ಸೆಲೆಬ್ರೆಟಿ ಕೇಶ ವಿನ್ಯಾಸಕಾರ:
ಮೂಲತಃ ಕರಾವಳಿಯ ಯುವಕನಾಗಿರುವ ಶಿವರಾಮ ಭಂಡಾರಿ ಉದ್ಯೋಗ ನಿಮಿತ್ತ ಮುಂಬೈಗೆ ತೆರಳಿದವರು ತನ್ನ ಅವಿರತ ಪರಿಶ್ರಮ, ಸಾಧನೆಯಿಂದ ಉದ್ಯಮಿಯಾಗಿ ಬೆಳೆದವರು. ಕೇಶವಿನ್ಯಾಸ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದವರು. ಮುಂಬೈಯಲ್ಲಿ ಜನ ಸಾಮಾನ್ಯರಿಂದ ಮೊದಲ್ಗೊಂಡು ಬಾಲಿವುಡ್ ನಟ, ನಟಿಯರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಂಸದರ ವರೆಗೆ ಕೇಶ ವಿನ್ಯಾಸಕ್ಕಾಗಿ ಶಿವರಾಮ ಭಂಡಾರಿ ಸ್ಥಾಪಿಸಿದ ಶಿವಾ’ಸ್ ಸಂಸ್ಥೆಯ ಸೆಲೂನ್ಗಳು ಬೇಕು. ಕೇಶ ವಿನ್ಯಾಸ ಹಾಗೂ ಸೌಂದರ್ಯವರ್ಧನೆಗೆ ಬೇಕಾದಂತಹ ಉತ್ಪನ್ನಗಳು ಇವರ ಸಂಸ್ಥೆಯಲ್ಲಿಯೇ ತಯಾರಾಗುತ್ತಿರುವುದು ಇನ್ನೊಂದು ವಿಶೇಷ. ಖ್ಯಾತ ಬಾಲಿವುಡ್ ನಟ ಅಮಿತಾಬಚ್ಚನ್ನಿಂದ ಮೊದಲ್ಗೊಂಡು ಬಾಲಿವುಡ್ನ ಜನಪ್ರಿಯ ತಾರೆಗಳು, ಮುಂಬೈಯ ರಾಜಕಾರಣಿಗಳು, ಉದ್ಯಮಿಗಳು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು, ಕೇಶ ವಿನ್ಯಾಸ ಮಾಡಿಸಿಕೊಳ್ಳಲು ಶಿವಾರಾಮ ಭಂಡಾರಿಯನ್ನೇ ಅವಲಂಬಿಸಿರುವುದು ಇವರು ಕೇಶ ವಿನ್ಯಾಸ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ನಿದರ್ಶನ. ಈ ಕಾರಣಕ್ಕಾಗಿಯೇ ಸಾಮಾನ್ಯ ಕ್ಷೌರಿಕನಾಗಿದ್ದ ಕೆ. ಶಿವರಾಂ ಭಂಡಾರಿ ಇಂದು ಸೆಲೆಬ್ರೆಟಿಯಾಗಿರುವುದು, ಗೌರವ ಡಾಕ್ಟರೇಟ್ನಂತಹ ಅತ್ಯುನ್ನತ ಪ್ರಶಸ್ತಿಗಳು ಅರಸಿ ಬಂದಿರುವುದು.
ಶಿವರಾಮ ಕೆ.ಭಂಡಾರಿ ಸಾಧನೆಯ ಮೈಲುಗಲ್ಲು:
1988 ರಲ್ಲಿ ಮುಂಬೈಯಲ್ಲಿ ಶಿವಾಸ್ ಸಂಸ್ಥೆ, 1993ರಲ್ಲಿ ಸ್ಟೈಲೋ ಹೇರ್ ಪಾರ್ಲರ್, 2001 ರಲ್ಲಿ ಶಿವಾಸ್ ಸ್ಟೈಲೋ ಸಂಸ್ಥೆ, 2007ರಲ್ಲಿ ಶಿವಾಸ್ ಹೇರ್ ಡಿಸೈನರ್ ಪ್ರೈವೇಟ್ ಲಿಮಿಟೆಡ್ ಆರಂಭಿಸಿದರು. ಕೇಶ ವಿನ್ಯಾಸವನ್ನು ವೃತ್ತಿಯಾಗಿ ಸ್ವೀಕರಿಸುವವರಿಗೆ ಸೂಕ್ತ ತರಬೇತಿ ನೀಡಲು 2009ರಲ್ಲಿ ಶಿವಾಸ್ ಅಕಾಡೆಮಿ ಸ್ಥಾಪಿಸಿದರು. 2022ರಲ್ಲಿ ಶಿವಾಸ್ ಸೆಲ್ಯೂಟ್ ಎನ್ನುವ ದೇಶ ಭಕ್ತಿ ಪ್ರೇರೆಪಿಸುವ ಪರಿಕಲ್ಪನೆಯ ಸೆಲೂನ್ ಸ್ಥಾಪಿಸಿದರು. ಇದೀಗ ಶಿವಾ’ಸ್ ಸಂಸ್ಥೆ ಮೂರು ದಶಕಗಳ ಸಾರ್ಥಕ ಸೇವೆಯಲ್ಲಿ ಮುನ್ನಡೆಯುತ್ತಿದೆ.
ಕೇಶವೃತ್ತಿಯ ಜೊತೆಗೆ ಆರೋಗ್ಯಯುತವಾಗಿ ಕೂದಲ ಆರೈಕೆ, ಕೂದಲ ವಿಸ್ತರಣೆ, ಚರ್ಮದ ಆರೈಕೆ, ದೇಹದ ಸ್ವಾಸ್ಥ್ಯತೆ, ಚರ್ಮದ ಹಚ್ಚೆ, ವಧುವಿನ ಶೃಂಗಾರ, ಉಗುರುಗಳ ಹೊಳಪು ಇತ್ಯಾದಿಗಳ ತರಬೇತಿ ನೀಡಿ ಶಿವಾ’ಸ್ ಅಕಾಡೆಮಿ ಸರ್ಟಿಫಿಕೇಟ್ ನೀಡಿ ವೃತ್ತಿಪರರನ್ನಾಗಿಸಿದೆ.
ಈ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ತಮ್ಮ ಇಚ್ಚೆಯ ಉದ್ಯೋಗ ಪಡೆದಿರುವುದಲ್ಲದೆ ಹಲವರು ಸ್ವ ಉದ್ಯೋಗ ಆರಂಭಿಸಿ ಆರ್ಥಿಕ ಸ್ವತಂತ್ರರಾಗಿದ್ದಾರೆ.
ಶಿವಾ’ಸ್ ಅಕಾಡೆಮಿ:
ಅಂತರಾಷ್ಟ್ರೀಯ ಗೌರವಕ್ಕೆ ಪಾತ್ರವಾಗಿರುವ ಶಿವಾ’ಸ್ ಅಕಾಡೆಮಿ ಜಗತ್ತಿನ ಪ್ರತಿಷ್ಠಿತ ಟೋನಿ ಆಂಡ್ ಗೈ ಸಂಸ್ಥೆ, ವಿಶ್ವದ ಪ್ರತಿಷ್ಠಿತ ವಿಡಾಲ್ ಸಾಸೂನ್ ಸಂಸ್ಥೆಯಿಂದಲೂ ಸುಧಾರಿತ ಪ್ರಮಾಣೀಕರಣಪತ್ರಕ್ಕೆ ಭಾಜನವಾಗಿದೆ. ಲಂಡನ್ ಮೂಲದ ವಿಶ್ವಪ್ರಸಿದ್ಧ ಹೇರ್ ಸ್ಟೈಲಿಂಗ್ ಅಕಾಡೆಮಿ ಯಾಗಿರುವ ಅರ್ಥ್ ಅಕಾಡೆಮಿ ಕೂಡಾ ಶಿವಾ’ಸ್ ಅನ್ನು ವೃತ್ತಿಪರ ಶಿಕ್ಷಣ ಸಂಸ್ಥೆ ನಡೆಸಲು ಸಂಯೋಜಿತ ಅಧಿಕೃತ ಸಂಸ್ಥೆಯನ್ನಾಗಿಸಿ ಆಯ್ದುಕೊಂಡಿದೆ. ಈ ಮೂಲಕ ಬೃಹನ್ಮುಂಬಯಿಯಲ್ಲಿ ಎರಡು (ಅಂಧೇರಿ ಮತ್ತು ಡೊಂಬಿವಿಲಿ) ಶಿವಾ’ಸ್ ಅಕಾಡೆಮಿಗಳನ್ನು ನಡೆಸುತ್ತಿದ್ದು, ಇದರ ಇನ್ನೊಂದು ಸಾಧನೆಯ ಮೈಲುಗಲ್ಲಾಗಿ ಮಂಗಳೂರಿನಲ್ಲಿ ಸೀಪಿ ಕಾಲೇಜು ಆರಂಭಗೊಳ್ಳಲಿದೆ.