
ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕಂಬ ಎಂಬಲ್ಲಿ ಮೂರನೇ ಮಹಡಿಯಲ್ಲಿ ಡಿಶ್ ಅಳವಡಿಸುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ. ಕೊಯಿಲ ಗ್ರಾಮದ ಗೋವಿಂದಬೆಟ್ಟು ನಿವಾಸಿ ಚಾಲಕ ಜಯಂತ ಶ್ರೀಯಾನ್ ಎಂಬವರ ಪುತ್ರ ಯತಿನ್ ಗಾಣಿಗ (30) ಮೃತ ದುರ್ದೈವಿ. ಇವರು ವಸತಿ ಗೃಹವೊಂದರ ಮೂರನೇ ಮಹಡಿಯಲ್ಲಿ ಡಿಶ್ ಅಳವಡಿಸುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಈ ಮಹಡಿ ಕೆಳಗೆ ಬಾವಿಗೆ ಅಳವಡಿಸಿದ್ದ ಕಬ್ಬಿಣದ ರಕ್ಷಣಾ ಬೇಲಿಗೆ ಇವರ ತಲೆ ಬಡಿದು ತೀವ್ರ ರಕ್ತಸ್ರಾವ ಸಹಿತ ಗಂಭೀರ ಗಾಯಗೊಂಡಿದ್ದರು. ಸ್ಥಳೀಯರು ಕೂಡಲೇ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ 10 ವರ್ಷಗಳಿಂದ ಟಿವಿ ರಿಪೇರಿ, ಡಿಶ್ ಅಳವಡಿಕೆ ಮತ್ತು ಎಸಿ ಮೆಕ್ಯಾನಿಕ್ ವೃತಿ ನಡೆಸುತ್ತಿದ್ದು ಮನೆಗೆ ಆಧಾರ ಸ್ತಂಭವಾಗಿದ್ದರು. ಮೃತರಿಗೆ ತಂದೆ, ತಾಯಿ ಮತ್ತು ಸಹೋದರಿ ಇದ್ದಾರೆ.

