ಬಂಟ್ವಾಳ: ಬಲತ್ಕಾರದ ಮತಾಂತರವನ್ನು ತಡೆಗಟ್ಟುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಜನಪರವಾದ ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದತಿ, ಶಾಲಾ ಪಠ್ಯಪುಸ್ತಕದಿಂದ ಸಾವರ್ಕರ್ ಹಾಗೂ ಹೆಗಡೇವಾರ ಅವರ ವಿಷಯವನ್ನು ಕೈ ಬಿಟ್ಟಿರುವ ಕಾಂಗ್ರೆಸ್ ಸರಕಾರದ ತೀರ್ಮಾನವನ್ನು ಖಂಡಿಸುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ತಿಳಿಸಿದರು.
ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ
ಒರ್ವ ವ್ಯಕ್ತಿ ತನ್ನ ಸ್ವ ಇಚ್ಛೆಯಿಂದ ಕಾನೂನು ಬದ್ದವಾಗಿ ಯಾವುದೇ ಧರ್ಮಕ್ಕೆ ಮತಾಂತರ ಹೊಂದುವ ಅವಕಾಶ ಇದೆ. ಆದರೆ ಬಲತ್ಕಾರ ಹಾಗೂ ಆಮಿಷವೊಡ್ಡಿ ಮತಾಂತರ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಸರಕಾರ ಜಾರಿಗೆ ತಂದಿತ್ತು. ಇದೀಗ ಅದನ್ನು ಈಗಿನ ಸರಕಾರ ಹಿಂಪಡೆದಿರುವುದರಿಂದ ಸಮಾಜದಲ್ಲಿ ಮತ್ತೆ ಅಶಾಂತಿಯ ವಾತಾವರಣ ನಿರ್ಮಾಣವಾಗಬಹುದು. ಇದರಿಂದ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ವೋಟ್ ಬ್ಯಾಂಕ್ ಸೃಷ್ಟಿಸುವ ಸಲುವಾಗಿ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆದಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತರು ಬೆಳೆದ ಬೆಳೆಗಳನ್ನು ಎಲ್ಲಾ ಕಡೆ ಮಾರಾಟ ಮಾಡಲು ಅವಕಾಶ ಒದಗಿಸಲಾಗಿತ್ತು. ಕಾಂಗ್ರೆಸ್ ಸರಕಾರ ಅದನ್ನು ರದ್ದು ಪಡಿಸುವ ಮೂಲಕ ರೈತರಿಗೆ ಅನ್ಯಾಯ ವೆಸಗಿದೆ ಎಂದು ಅವರು ಆರೋಪಿಸಿದರು. ಪಠ್ಯ ಪುಸ್ತಕದಲ್ಲಿ ಅಳವಡಿಸಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್, ಹಾಗೂ ಆರ್ಎಸ್ಎಸ್ ಸಂಸ್ಥಾಪಕ ಹೆಗಡೆವಾರ್ ಅವರ ವಿಷಯಗಳನ್ನು ತೆಗೆದುಹಾಕುವ ಮೂಲಕ ರಾಜ್ಯ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ದೂರಿದ ಅವರು ರಾಜ್ಯ ಕಾಂಗ್ರೆಸ್ ಸರಕಾರ ಈ ಮೂರು ನಿರ್ಧಾರಗಳನ್ನು ಹಿಂಪಡೆಯದಿದ್ದರೆ ಇದರ ವಿರುದ್ಧ ಹೋರಾಟ ನಡೆಸಲು ಸಿದ್ಧರಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಡೊಂಬಯ್ಯ ಅರಳ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಪಕ್ಷ ಪ್ರಮುಖರಾದ ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ, ಚಿದಾನಂದ ರೈ ಕಕ್ಯಪದವು, ಕಿಶೋರ್ ಪಲ್ಲಿಪಾಡಿ, ಮೋಹನ್ ಪಿಎಸ್., ಯಶೋಧರ ಕರ್ಬೆಟ್ಟು, ಆನಂದ ಶಂಭೂರು, ಶಿವಪ್ರಸಾದ್ ಶೆಟ್ಟಿ, ಚಂದ್ರಕಲಾ ಉಪಸ್ಥಿತರಿದ್ದರು.