
ಬಂಟ್ವಾಳ: ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದರಿಂದ ಇತರ ಖಾಸಗಿ ವಾಹನಗಳ ಮಾಲಕರು ಕಂಗಲಾಗಿ ಹೋಗಿದ್ದಾರೆ. ಕಾರು, ರಿಕ್ಷಾ, ಇನ್ನಿತರ ಖಾಸಗಿ ವಾಹನ ಮಾಲೀಕರ ಬದುಕಿಗೆ ಈ ಯೋಜನೆ ಮಾರಕವಾಗಿದೆ. ಸರ್ಕಾರ ಅವರ ಬದುಕಿಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕು ಅಥವಾ ಮಾಸಿಕ ಪರಿಹಾರ ಹಣವನ್ನು ನೀಡಬೇಕು ಎಂದು ಜಿ.ಪಂ. ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ ಸರಕಾರವನ್ನು ಆಗ್ರಹಿಸಿದರು.


ಶನಿವಾರ ಬಿ.ಸಿ. ರೋಡು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸರ್ಕಾರಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಸಂಚರಿಸುವ ಶ್ರೀಮಂತ ಮಹಿಳೆಯರಿಗೆ ಮಾತ್ರ ಲಭಿಸಿದೆ. ಗ್ರಾಮೀಣ ಭಾಗದ ಮಹಿಳೆಯರು ಇದರಿಂದ ವಂಚಿತರಾಗಿದ್ದಾರೆ. ತಾಲೂಕಿನ ಗ್ರಾಮೀಣ ಭಾಗಗಳಾದ ಬಿ.ಸಿ.ರೋಡಿನಿಂದ ಪೊಳಲಿ, ಸಿದ್ದಕಟ್ಟೆ, ವಾಮದಪದವು, ಶಂಬೂರು, ಮಂಚಿ, ಸಜೀಪ, ಚೇಳೂರು ಇತರ ಕಡೆಗೂ ಸರ್ಕಾರಿ ಬಸ್ಸು ಸೌಲಭ್ಯ ಕಲ್ಪಿಸಿ ಗ್ರಾಮೀಣ ಭಾಗದ ಮಹಿಳೆಯರಿಗೂ ಉಚಿತ ಪ್ರಯಾಣದ ಭಾಗ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ಗೃಹಲಕ್ಷ್ಮಿ ಯೋಜನೆಯನ್ನು ಮನೆಯ ಯಜಮಾನಿಗೆ ಮಾತ್ರವಲ್ಲದೆ ಎಲ್ಲಾ ಬಡ ಮಹಿಳೆಯರಿಗೂ ನೀಡಬೇಕೆಂದು ಆಗ್ರಹಿಸಿದರು.
ಬಲತ್ಕಾರದ ಮತಾಂತರ ಕಾಯ್ದೆಯನ್ನು ವಾಪಸ್ಸು ಪಡೆದು ಕಾಂಗ್ರೆಸ್ ಪಕ್ಷ ದ್ವೇಷದ ರಾಜಕಾರಣ ಮಾಡುತ್ತಿದೆ. ಸರ್ಕಾರದ ಈ ನಡೆಯನ್ನು ವಿರೋಧಿಸುವುದಾಗಿ ತಿಳಿಸಿದರು.
ಪುಂಜಾಲಕಟ್ಟೆಯಲ್ಲಿ ನಿರ್ಮಿಣಗೊಳ್ಳಲಿದ್ದ ಜಿಲ್ಲೆಯ ಏಕೈಕ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಯಾಗಿದ್ದ ೩೦ ಕೋಟಿ ಅನುದಾನವನ್ನು ಸರ್ಕಾರ ತಡೆ ಹಿಡಿದಿರುವುದು ಸರಿಯಲ್ಲ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ರಿಕ್ಷಾ ಚಾಲಕ- ಮಾಲಕರ ಸಂಘದ ಜಿಲ್ಲಾ ಕಾರ್ಯದರ್ಶಿ ವಸಂತ ಉಮಾರ್ ಮಣಿಹಳ್ಳ, ಟೂರಿಸ್ಟ್ ಟೆಂಪೋ ಚಾಲಕರ ಸಂಘದ ಸದಾನಂದ ಗೌಡ ನಾವೂರು, ಕಾರು ಮತ್ತು ಟ್ಯಾಕ್ಸಿ ಚಾಲಕರ ಸಂಘದ ಮಾಜಿ ಅಧ್ಯಕ್ಷ ವಿಠಲ ಶೆಟ್ಟಿ ಮದ್ವಗುತ್ತು ಉಪಸ್ಥಿತರಿದ್ದರು.
—
