ಬಂಟ್ವಾಳ: ಮಳೆಗಾಲದ ಸಂದರ್ಭದಲ್ಲಿ ಪಂಚಾಯತಿ ಪಿಡಿಓಗಳು ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದುಕೊಂಡು ಕಾರ್ಯನಿರ್ವಹಿಸಬೇಕು, ಪೋನ್ ಸ್ವಿಚ್ ಆಫ್ ಮಾಡಿಕೊಳ್ಳದೆ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು, ಯಾವುದೇ ಸಮಸ್ಯೆ, ಅವಘಡಗಳು ಎದುರಾದರೂ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿ.ಸಿ.ರೋಡಿನ ಎಸ್ಜೆಎಸ್ಆರ್.ವೈ ಸಭಾಂಗಣದಲ್ಲಿ ನಡೆದ ಮುಂಗಾರು ಮಳೆ ಹಾಗೂ ಪ್ರಾಕೃತಿಕ ವಿಕೋಪದಿಂದ ಜೀವಹಾನಿ, ಜಾನುವಾರು ಹಾನಿ, ನೆರೆ ಹಾವಳಿ, ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಕುರಿತು ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓಗಳು, ವಿಎಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೇ. 31ರಿಂದ ಶಾಲೆಗಳು ಪುನಾರಂಭಗೊಳ್ಳಲಿದ್ದು ಬಂಟ್ವಾಳ ತಾಲೂಕಿನ 64 ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ. ಸಭೆಯ ಗಮನಕ್ಕೆ ತಂದರು. ಚುನವಣೆಯ ಸಂಧರ್ಭ ಪುಚ್ಚೇರಿಯ ಡ್ಯಾಂನಿಂದ ನೀರನ್ನು ಸಂಪೂರ್ಣವಾಗಿ ಹೊರ ಹರಿಯಲು ಬಿಟ್ಟಿರುವ ಡ್ಯಾಂ ಅಧಿಕಾರಿಗಳ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ ಶಾಸಕ ರಾಜೇಶ್ ನಾಯ್ಕ್ ಈ ಬಗ್ಗೆ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಹೇಳಿರುವುದಾಗಿ ತಿಳಿಸಿದರು. ಈ ಸಂದರ್ಭ ಜನರಿಗೆ ಯಾವುದೇ ರೀತಿಯ ನೀರಿನ ತೊಂದರೆ ಆಗಬಾರದೆನ್ನುವ ಉದ್ದೇಶದಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿದೆ ಎಂದು ತಿಳಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್ವೆಲ್ನಲ್ಲಿ ಕರೆಂಟ್ ಇಲ್ಲದೆ ಇದ್ದರೆ ನೀರು ಸರಬರಾಜಾಗುವುದಿಲ್ಲ ಎಂದು ನರಿಕೊಂಬು ಗ್ರಾ.ಪಂ. ಅಧ್ಯಕ್ಷೆ ವಿನುತ ಪುರುಷೋತ್ತಮ ಶಾಸಕರ ಗಮನಕ್ಕೆ ತಂದರು. ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ ನೀರಾವರಿ ಘಟಕಗಳಿಗೆ ಪವರ್ಕಟ್ ಮಾಡದೆ ವಿದ್ಯುತ್ ಒದಗಿಸುವಂತೆ ಅವರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಬಂಟ್ವಾಳ ಸಿಡಿಪಿಓ ಕಚೇರಿ ವ್ಯಾಪ್ತಿಯಲ್ಲಿರುವ 40 ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದಾಗಿ ಸಿಡಿಪಿಓ ಗಾಯತ್ರಿ ಕಂಬಳಿ ಸಭೆಯ ಗಮನಕ್ಕೆ ತಂದರು. ಅಂಗನವಾಡಿ ಕೇಂದ್ರಗಳಿಗೆ ಸಣ್ಣ ಮಕ್ಕಳು ಬರುವುದರಿಂದ ಅವರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಸ್ವಲ್ಪ ವಿಂಬವಾಗಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸುವ ಬಗ್ಗೆ ರಾಜ್ಯಮಟ್ಟದ ಅಧಿಕಾರಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು. 12 ಅಂಗನವಾಡಿ ಕೇಂದ್ರಗಳು ಶಿಥಿಲಾವಸ್ಥೆ ತಲುಪಿದ್ದು ದುರಸ್ತಿ ಪಡಿಸವಂತೆ ಕೆಆರ್ಡಿಎಲ್ ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದಿನೆ ನೀಡುತ್ತಿಲ್ಲ ಎಂದು ಸಿಡಿಪಿಓ ದೂರಿದರು. ವಿಟ್ಲ ಸಿಡಿಪಿಓ ವ್ಯಾಪ್ತಿಯಲ್ಲಿ 15 ಅಂಗನವಾಡಿ ಕೇಂದ್ರಗಳಲ್ಲಿ ನೀರಿನ ಸಮಸ್ಯೆ ಇದೆ. ಮಳೆಹಾನಿ ಅನುದಾನದಡಿ 5 ಅಂಗನವಾಡಿ ಕಟ್ಟಡ ಮಂಜೂರಾಗಿದ್ದು 2 ಕಟ್ಟಡಗಳು ಪೂರ್ತಿಯಾಗಿದೆ ಎಂದು ವಿಟ್ಲ ಸಿಡಿಪಿಓ ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬಿ.ಸಿ.ರೋಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಸತಿ ಶಾಲೆ ಶಿಥಿಲಗೊಂಡಿದ್ದು ಹೊಸ ಕಟ್ಟಡ ನಿಮಾಣಗೊಳ್ಳುವರೆಗೆ ವಸತಿ ಶಾಲೆಯನ್ನು ಬೆಂಜನಪದವು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು. ತಾಲೂಕಿನಲ್ಲಿ 3755 ಹೆಕ್ಟೇರ್ ಸಾಗುವಳಿ ಭೂಮಿ ಇದ್ದು ಮೊದಲ ಹಂತದಲ್ಲಿ 50 ಕ್ವಿಂಟಲ್ ಬಿತ್ತನೆ ಬೀಜ ದಾಸ್ತನು ಇರುವುದಾಗಿ ಕೃಷಿ ಅಧಿಕಾರಿ ತಿಳಿಸಿದರು. ಬೇರೆ ಬೇರೆ ತೋಟಗಾರಿಕೆ ಬೆಳೆಗಳನ್ನು ಅಭಿವೃದ್ದಿ ಪಡಿಸಬೇಕಾಗಿದ್ದು ಪುನರ್ ಪುಳಿಗೆ ಸಾಕಷ್ಟು ಬೇಡಿಕೆ ಇರುವುದರಿಂದ ಆ ಗಿಡಗಳನ್ನು ಬೆಳೆಸಲು ಗಮನ ಹರಿಸುವಂತೆ ಶಾಸಕರು ತೋಟಗಾರಿಕಾ ಇಲಾಖಾ ಅಧಿಕಾರಿ ಪ್ರದೀಪ್ ಡಿಸೋಜಾ ಅವರಿಗೆ ತಿಲಿಸಿದರು.
ಹವಮಾನ ಆಧಾರಿತ ಬೆಳೆ ವಿಮೆಯ ಬಗ್ಗೆ ಜನರಿಗೆ ಹೆಚ್ಚು ಮಾಹಿತಿ ನೀಡುವ ಕಾರ್ಯ ಮಾಡಬೇಕೆಂದರು.
ಮರ ಕಡಿಯಲು ಗರಗಸ ಇಲ್ಲ:
ಮಳೆಗಾಲ ಬರುವ ಮೊದಲೇ ರಸ್ತೆ ಬದಿಯಲ್ಲಿರುವ ದೊಡ್ಡ ದೊಡ್ಡ ಮರಗಳ ಗೆಲ್ಲುಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗೆ ತಿಳಿಸಿದಾಗ ನಮ್ಮಲ್ಲಿ ಗರಗಸ ಮೊದಲಾದ ಮರಕಡಿಯುವ ಯಂತ್ರೋಪಕರಣಗಳು ಇಲ್ಲವೆಂದು ಸಹಾಯಕ ವಲಯ ಅರಣ್ಯಾಧಿಕಾರಿ ಅಳಲು ತೋಡಿಕೊಂಡರು. ಈ ಸಂದರ್ಭ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಡಿಎಫ್ಓ ಅವರಿಗೆ ದೂರವಾಣಿ ಕರೆ ಮಾಡಿ ಮರ ಕಡಿಯಲು ಬೇಕಾದ ಎಲ್ಲಾ ಯಂತ್ರೋಪಕರಣಗಳನ್ನು ಒದಗಿಸುವಂತೆ ತಿಳಿಸಿದರು. ನದಿ ತೀರದಲ್ಲಿ ಮುಳುಗಡೆಯಾಗುವ ಖಾಲಿ ಜಾಗ ಇದ್ದು ಜಾನುವಾರುಗಳಿಗೆ ಮೇವು ಬೆಳೆಸಲು ಸಾಕಷ್ಟು ಅವಕಾಶ ಇದೆ ಎಂದು ಪಶುಸಂಗೋಪನ ಇಲಾಖೆಯ ಅಧಿಕಾರಿಗೆ ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು. ಸಜೀಪಮೂಡ ಗ್ರಾಮದ ಏತ ನೀರಾವರಿ ಯೊಜನೆಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿರುವ ಮೆಸ್ಕಾಂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಪಂಚಾಯತಿ ಮಟ್ಟದಲ್ಲಿ ಚರಂಡಿ ದುರಸ್ತಿಗೆ ಹೆಚ್ಚಿನ ಅನುದಾನ ಇರುವುದಿಲ್ಲ, ವಿಶೇಷ ಅನುದಾನ ಮೀಸಲಿಡುವಂತೆ ಕರಿಯಂಗಳ ಗ್ರಾ.ಪಂ. ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಆಗ್ರಹಿಸಿದರು. ರಸ್ತೆ ಕಾಮಗಾರಿ ಆಗುವಾಗ ಇಂಜಿನಿಯರ್ಗಳು ಬರುವುದಿಲ್ಲ ಎಂದು ಕಡೇಶಿವಾಲಯ ಗ್ರಾ,ಪಂ. ಅಧ್ಯಕ್ಷ ಆರೋಪಿಸಿದರು. ರಾಜೇಶ್ ನಾಕ್ ಪ್ರತಿಕ್ರಿಯಿಸಿ ರಸ್ತೆ ನಿರ್ಮಾನದ ವೇಳೆ ನಿಮಗೂ ಜವಾಬ್ದಾರಿ ಇದೆ. ರಸ್ತೆ ಗುಣಮಟ್ಟ ಇರುವಂತೆ ನೋಡಬೇಕು, ಕಳಪೆ ಇದ್ದಾಗ ನಿಲ್ಲಿಸಬೇಕು ಎಂದರು. ಕೊಯಿಲ ಗ್ರಾಮದ ಗೋವಿಂದ ಬೆಟ್ಟು ಎಂಬಲ್ಲಿ ಟಿಸಿ ಕೆಟ್ಟು ಹೋಗಿ ಐದು ದಿನ ಆಯ್ತು ಎಂದು ಸಭೆಯ ಗಮನಕ್ಕೆ ತಂದರು. ತಕ್ಷರ ಶಾಸಕರು ಮೆಸ್ಕಾಂ ಎಂ.ಡಿ.ಗೆ ಕರೆ ಮಾಡಿ ಟಿಸಿ ಅಳವಡಿಸಲು ತಿಳಿಸಿದರು. ಟೆಲಿಕಾಂ ಸಂಸ್ಥೆ ಕೇಬಲ್ ಅಳವಡಿಸಲು ರಸ್ತೆ ಬದಿ ಹೊಂಡ ತೋಡುವುದರಿಂದ ರಸ್ತೆಗೆ ಹಾನಿ ಉಂಟಾಗುತ್ತಿದೆ ಎಂದು ರಾಯಿ ಗ್ರಾ.ಪಂ. ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಗಮನ ಸೆಳೆದರು. ಗುಡ್ಡಗಳಿಂದ ಮಣ್ಣು ಅಗೆಯುವ ಸಂದರ್ಭವೇ ಅಧಿಕಾರಿಗಳು ಗಮನ ಹರಿಸಬೇಕು. ಮಳೆಗಾಲದಲ್ಲಿ ಇದರಿಂದ ಅಪಾಯಗಳು ಉಂಟಾಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು. ತಹಶೀಲ್ದಾರ ಎಸ್.ಬಿ. ಕೂಡಲಿಗಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ವಿವಿಧ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಓಗಳು ಆರ್ಐ, ವಿಎಗಳು ಉಪಸ್ಥಿತರಿದ್ದರು.