ಬಂಟ್ವಾಳ: ಬಿಎಲ್ಓ ಆಗಿ ಕರ್ತವ್ಯ ನಿರ್ವಹಿಸಿಲ್ಲ ಎನ್ನುವ ಕಾರಣಕ್ಕೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಫರ್ಲಾ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಲತಾ ಅವರ ಅಮಾನತು ಆದೇಶವನ್ನು ದ.ಕ. ಜಿಲ್ಲಾಧಿಕಾರಿ ಹಿಂಪಡೆದುಕೊಂಡಿದ್ದು ಕರ್ತವ್ಯಕ್ಕೆ ಪುನರ್ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಲತಾ ಅವರು ಗುರುವಾರದಿಂದಲೇ ಕರ್ತವ್ಯಕ್ಕೆ ಹಾಜರಾಗಿರುವುದಾಗಿ ತಿಳಿದು ಬಂದಿದೆ.
ಲತಾ ಅವರು ಬಿಎಲ್ಒ ಕೆಲಸ ನಿರ್ವಹಿಸಲು ಅಸಾಧ್ಯವಾಗುತ್ತಿರುವ ಬಗ್ಗೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಮೊದಲೇ ಸಂಬಂಧಪಟ್ಟ ಅಧಿಕಾರಿಗಳಿಗೆಲ್ಲರಿಗೂ ಲಿಖಿತವಾಗಿ ಮತ್ತು ಖುದ್ದಾಗಿ ಪರಿಸ್ಥಿತಿಯನ್ನು ವಿವರಿಸಿದ್ದರೂ, ಜಿಲ್ಲಾಧಿಕಾರಿಯವರು ಅವರನ್ನು ಅಮಾನತು ಮಾಡಿದ್ದರು. ಇದರಿಂದಾಗಿ ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಸಂಘ ಲತಾ ಅವರ ಬೆಂಬಲಕ್ಕೆ ನಿಂತು ಸಂಘದ ಮೂಲಕ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ದಾಖಲೆ ಸಹಿತ ಅವರಿಗೆ ವಿವರಣೆ ನೀಡಿ ಬಡಪಾಯಿ ಲತಾ ಅವರ ಅಮಾನತು ಆದೇಶ ವಾಪಾಸ್ ಪಡೆದು ಹುದ್ದೆಯಲ್ಲಿ ಮುಂದುವರಿಸಲು ಒತ್ತಾಯಿಸಿತ್ತು. ತಮ್ಮ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಎಲ್ಲಾ ಬಿಎಲ್ಓ ಗಳು ಕರ್ತವ್ಯ ರಾಜಿನಾಮೆ ನೀಡುವ ಎಚ್ಚರಿಕೆಯನ್ನು ಸಂಘ ನೀಡಿತ್ತು. ಲತಾ ಅವರು ಬಂಟ್ವಾಳ ತಹಶೀಲ್ದಾರರಿಗೆ, ಸಿಡಿಪಿಒ ಅವರ ಮೂಲಕ ಹಾಗೂ ಖುದ್ದಾಗಿ ವಿವರಣೆ ನೀಡಿದರೂ ಅವರನ್ನು ಅಮಾನತು ಮಾಡಿರುವುದರ ಹಿಂದೆ ಇಲ್ಲಿನ ಕೆಲ ಅಧಿಕಾರಿಗಳ ಹುನ್ನಾರ ಅಡಗಿದೆ ಎಂದು ಆರೋಪಿಸಲಾಗಿತ್ತು. ಇದೀಗಸೂಕ್ತ ತನಿಖೆ ನಡೆಸಿ ನಡೆಸಿರುವ ಜಿಲ್ಲಾಧಿಕಾರಿ ಸಂಘದ ಮನವಿಗೆ ಸ್ಪಂದಿಸಿ ಅಮಾನತು ಆದೇಶವನ್ನು ಹಿಂಪಡೆದುಕೊಂಡಿದ್ದಾರೆ.