
ಬಂಟ್ವಾಳ: ವೈಯಕ್ತಿಕ ವಿಚಾರಗಳು ಏನಿದ್ದರೂ ಎಲ್ಲವನ್ನು ಬದಿಗಿಟ್ಟು, ಕಾರ್ಯಕರ್ತರು ಚುನಾವಣಾ ದಿನದವರೆಗೆ ನಿದ್ರಿಸದೆ ಕಾಲಿಗೆ ಚಕ್ರಕಟ್ಟಿದಂತೆ ನಿರಂತರವಾಗಿ ಮತದಾರರ ಬಳಿಗೆ ತೆರಳಿ ಪ್ರತಿ ಮನೆಯನ್ನು ಸಂಪರ್ಕ ಮಾಡಿ, ಬಂಟ್ವಾಳದಲ್ಲಿ ಗೆಲುವಿನ ವಿಜಯದ ಪತಾಕೆ ಹಾರಿಸಬೇಕು ಎಂದು ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ತಿಳಿಸಿದರು.
ಅವರು ಪಂಜಿಕಲ್ಲು ಗ್ರಾಮದಲ್ಲಿ ಮತದಾರರ ಮನೆಬಾಗಿಲಿಗೆ ತೆರಳಿ ಮತಯಾಚನೆ ನಡೆಸಿ ಮಾತನಾಡಿದರು.

ಕಾರ್ಯಕರ್ತರು ನಮ್ಮ ನಮ್ಮ ಬೂತ್ ನ್ನು ಗೆಲ್ಲಲು ಪ್ರಯತ್ನ ಮಾಡಿದಾಗ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಗೆದ್ದರೆ ಸಾಮಾನ್ಯ ಕಾರ್ಯಕರ್ತ ಗೆದ್ದಂತೆ, ಕಾರ್ಯಕರ್ತನ ಗೆಲುವಿಗಾಗಿ ಜೊತೆಯಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರದ ಡಬ್ಬಲ್ ಇಂಜಿನ್ ಸರಕಾರದ ಫಲವಾಗಿ ಬಂಟ್ವಾಳ ಕ್ಷೇತ್ರದಲ್ಲಿ 2ಸಾವಿರಕ್ಕಿಂತಲೂ ಅಧಿಕ ಅನುದಾನಗಳ ಮೂಲಕ ಸರ್ವವ್ಯಾಪಿ ಸರ್ವಸ್ಪರ್ಷಿಯಾದ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶ ಸಿಕ್ಕಿತು ಎಂದು ಅವರು ತಿಳಿಸಿದರು.

ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಸರಕಾರದ ಜನಪರವಾದ ನೂರಾರು ಯೋಜನೆಗಳ ಬಗ್ಗೆ ಪ್ರತಿ ಮನೆಮನೆಗೆ ತೆರಳಿ ನೆನಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಅವರು ಮನವಿ ಮಾಡಿದರು.
ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಪಾರದರ್ಶಕವಾಗಿದ್ದು, ಕಾರ್ಯಕರ್ತರು ಗೌರವದಿಂದ ಎದೆತಟ್ಟಿ ಹೇಳಬಹುದು,ಆದರೆ ಬಿಜೆಪಿ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಸಹಿಸಲಾರದೆ, ಸುಳ್ಳು ಆರೋಪದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಬಿಜೆಪಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ರಮನಾಥ ರಾಯಿ ಮಾತನಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ದಬ್ಬಾಳಿಕೆಗೆ ಒಳಗಾದ ಗ್ರಾಮಪಂಚಾಯತ್ ಇದ್ದರೆ ಅದು ಪಂಜಿಕಲ್ಲು ಗ್ರಾ.ಪಂ. ಎಂಬುದು ಮತದಾರರಿಗೆ ಮರೆತಿಲ್ಲ ಎಂದರು.
ಗ್ರಾಮಪಂಚಾಯತ್ ಅಧ್ಯಕ್ಷ ಸಂಜೀವ ಪೂಜಾರಿ ಮಾತನಾಡಿ, ಪಂಜಿಕಲ್ಲು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಧಿಕ ಮತಗಳನ್ನು ಯಾವ ರೀತಿಯಲ್ಲಿ ಪಡೆಯಲು ಸಾಧ್ಯ ಎಂಬುದನ್ನು ಕಾರ್ಯಕರ್ತರು ತಂತ್ರಗಾರಿಕೆ ರೂಪಿಸಬೇಕಾಗಿದೆ ಎಂದು ತಿಳಿಸಿದ ಅವರು,ಹಿಂದುತ್ವದ ಉಳಿವಿಗಾಗಿ ಬಂಟ್ವಾಳದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಶಾಸಕರಾಗಬೇಕು ಎಂದು ಅವರು ಮನವಿ ಮಾಡಿದರು.

ಉಪಾಧ್ಯಕ್ಷೆ ಜಯಶ್ರೀ ಪಟ್ರಾಡಿ, ಸದಸ್ಯರಾದ ವಿಕೇಶ್,ಮೋಹನ್ ದಾಸ್, ಬಾಲಕೃಷ್ಣ, ಹರೀಶ್, ಪೂವಪ್ಪ ಮೆಂಡನ್, ಚಂದ್ರಾವತಿ, ಶೋಭಾ, ಲಕ್ಮೀನಾರಾಯಣ,
ಪ್ರಮುಖರಾದ ಪ್ರಕಾಶ್ ಅಂಚನ್, ನಾರಾಯಣ ಭಂಡಾರಿ, ಪ್ರವೀಣ್ ಪೂಜಾರಿ, ಆನಂದ ಕೋಟ್ಯಾನ್, ಗೋಪಾಲ ಪೂಜಾರಿ, ಹರಿಣಾಕ್ಷಿ, ಮಾದವ ಕರ್ಬೆಟ್ಟು, ಶಿವರಾಮ, ಅಶೋಕ್, ಮೋನಪ್ಪ ಪೂಜಾರಿ ಕರ್ತಾಜೆ, ಜಗದೀಶ್ ಬಾಕಿಮಾರ್, ಹರೀಶ್ ಕುಲಾಲ್, ಆಶ್ಬಿನ್ ಕುಲಾಲ್ ,ಜೋಕಿಂ ಮಿನೇಜಸ್
ಮತ್ತಿತರರು ಉಪಸ್ಥಿತರಿದ್ದರು.
