ಬಂಟ್ವಾಳ: ಬಂಟ್ವಾಳ ಕ್ಷೇತ್ರದಲ್ಲಿ ಆಗಿರುವಂತಹ ಅಭಿವೃದ್ದಿ ಕಾರ್ಯ, ಕಾನೂನು ಸುವ್ಯವಸ್ಥೆ, ಬಂಟ್ವಾಳದ ಬಗೆಗಿನ ದೂರದೃಷ್ಟಿ ಯೋಜನೆಗಳು ಎಲ್ಲವೂ ಬಂಟ್ವಾಳದ ಗೆಲುವಿಗೆ ಪೂರಕವಾಗಿದೆ. ಬಂಟ್ವಾಳ ಕ್ಷೇತ್ರದಲ್ಲಿ ಆಗಿರುವಂತಹ ಅಭಿವೃದ್ದಿ ಕೆಲಸಗಳನ್ನು ಕಂಡು ಇಲ್ಲಿನ ಎಲ್ಲಾ ಜನರೂ ಬಿಜೆಪಿಯನ್ನು, ಬಿಜೆಪಿಯ ಶಾಸಕರನ್ನು ಒಪ್ಪಿಕೊಂಡಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.
ಅವರು ಶನಿವಾರ ಬಿ.ಸಿ.ರೋಡಿನಲ್ಲಿ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಡಬ್ಬಲ್ ಇಂಜಿನ್ ಸರಕಾರವಾಗಿ ಮುಂದುವರೆಯುತ್ತಿದ್ದರೆ ಕಾಂಗ್ರೆಸ್ ಪಕ್ಷ ರಿವರ್ಸ್ ಗೇರ್ನಲ್ಲಿ ಚಲಿಸುತ್ತಿದೆ. ಪ್ರಸ್ತುತ ಕರಾವಳಿಯಲ್ಲಿ ಪಿಎಫ್ಐ ಸಂಘಟನೆ ಅಸ್ಥಿತ್ವದಲ್ಲಿ ಇಲ್ಲ, ಪಿಎಫ್ಐಯ ಬಿ ಟೀಮ್ ಆಗಿ ಎಸ್ಡಿಪಿಐ ಇದ್ದು ಕಾಂಗ್ರೆಸ್ ಅವರೊಂದಿಗೆ ಆಂತರಿಕ ಹೊಂದಣಿಕೆ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದೆ ಇದನ್ನು ಜನ ನೋಡುತ್ತಿದ್ದಾರೆ. ಕರಾವಳಿಯಲ್ಲಿ ಮತ್ತೆ ಭಯೋತ್ಪಾದನೆ ಹುಟ್ಟ ಬೇಕಾ, ಹಿಂದು ಯುವಕರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡ ಬೇಕಾ, ಜಿಲ್ಲೆಯಲ್ಲಿ ಅಶಾಂತಿ ಬೇಕಾ ಎನ್ನುವ ಚರ್ಚೆ ನಡೆಯುತ್ತಿದೆ ಎಂದರು.
ಮುಂದಿನ ೧೦ ದಿನಗಳಲ್ಲಿ ನಮ್ಮ ದೇಹದಲ್ಲಿರುವ ಎಲ್ಲ ಶಕ್ತಿಯನ್ನು ಸೇರಿಸಿಕೊಂಡು ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕು, ರಾಜೇಶ್ ನಾಯ್ಕ್ ಅವರು ಮತ್ತೆ ಬಹುಮತದಲ್ಲಿ ಗೆದ್ದು ಬರಬೇಕು, ಮುಸ್ಲಿಂ ಮಹಿಳೆಯರು ಬಿಜೆಪಿಗೆ ಮತ ನೀಡಲು ತಯಾರಾಗಿದ್ದಾರೆ, ಆದ್ದರಿಂದ ಎಲ್ಲಾ ಮತಗಳು ಬಿಜೆಪಿಗೆ ಬರುವಂತೆ ನೋಡಿಕೊಳ್ಳಬೇಕು ಮತ್ತೊಮ್ಮೆ ಬಂಟ್ವಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರು ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಪ್ರಮುಖರಾದ ಸುಲೋಚನಾ ಜಿ.ಕೆ. ಭಟ್, ಆರ್.ಸಿ. ನಾರಾಯಣ್ ಉಪಸ್ಥಿತರಿದ್ದರು. ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
—