
ಬಂಟ್ವಾಳ: ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕೋಟ್ಯಾಂತರ ರೂಪಾಯಿಯ ಅವ್ಯವಹಾರ ನಡೆದಿದ್ದು ಈ ಬಗ್ಗೆ ದಾಖಲೆ ಸಹಿತ ಸಾಮಾಜಿಕ ಜಾಲಾತಾಣದಲ್ಲಿ ಪ್ರಚಾರ ಪಡಿಸಿದಾಗ ಅದನ್ನು ಸಹಿಸದ ಬಿಜೆಪಿಗರು ಹಾಗೂ ನಿಕಟಪೂರ್ವ ಶಾಸಕರು ಇದು ಸುಳ್ಳು ಸುದ್ದಿಯೆಂದು ಹಬ್ಬಿಸುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಕೇಸು ದಾಖಲಿಸುತ್ತಾರೆ ಎಂದು ಕಾಂಗ್ರೆಸ್ ಹಿಂದುಳಿದವರ್ಗಗಳ ಜಿಲ್ಲಾ ಉಪಾಧ್ಯಕ್ಷ, ಸಾಮಾಜಿಕ ಜಾಲಾತಾಣದ ಮುಖಂಡ ಪದ್ಮನಾಭ ಸಾಮಂತ್ ಆರೋಪಿಸಿದರು.


ಅವರು ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಾರಂಬಡೆ ಬಳಿ ಕಾಡಬೆಟ್ಟು – ದರ್ಬಳಿಕೆ ರಸ್ತೆಯಲ್ಲಿ ಅವ್ಯವಹಾರ ನಡೆದಿದೆ, ಕಾರಂಬಡೆ ದೇವಸ್ಥಾನಕ್ಕೆ ಸಾರ್ವಜನಿಕ ಶೌಚಾಲಯ ನಿರ್ಮಿಸಿರುವುದಾಗಿ ಹೇಳಿದ್ದಾರೆ ಆದರೆ ಅಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯ ಇಲ್ಲ, ಕಡೇಶಿವಾಲಯಯ ದೇವಸ್ಥಾನ ಬಳಿ ನದಿಗೆ ಸಣ್ಣ ಸಣ್ಣ ಕಲ್ಲು ತುಂಡುಗಳನ್ನು ಹಾಕಿ ತಡೆಗೋಡೆ ನಿರ್ಮಿಸಿ ಹಣ ಗುಳು ಮಾಡಲಾಗಿದೆ, ಅದು ಈಗಾಲೇ ಉದುರಿ ಬೀಳುತ್ತದೆ ಮುಂದೆ ಮಳೆಗಾಲದಲ್ಲಿ ಉಳಿಯಲಿದೆಯೇ? ಎಂದು ಪ್ರಶ್ನಿಸಿದರು. ಬಿ.ಸಿ.ರೋಡು ಸುಂದರೀಕರಣ ಕಾಮಾಗರಿಯಲ್ಲಿ ಸಿಸಿ ಕ್ಯಾಮರ ಅಳವಡಿಸುವುದಾಗಿ ಹೇಳಿದ್ದಾರೆ, ಆದರೆ ಎಲ್ಲೂ ಸಿಸಿ ಕ್ಯಾಮರ ಕಾಣುತ್ತಿಲ್ಲ, ಎರಡೂ ಶೌಚಾಲಯ ನಿರ್ಮಿಸುವುದಾಗಿ ಹೇಳಿ ಒಂದು ಮಾತ್ರ ನಿರ್ಮಿಸಿದ್ದಾರೆ. ಅದಕ್ಕೂ ಬಾಗಿಲು ಇಲ್ಲ, ಒಂದೂವರೆ ಕೋಟಿಯ ಕಾಮಗಾರಿ ಇದಾಗಿದ್ದು ರಾಷ್ಟ್ರೀಯ ಹೆದ್ದಾರಿಯ ಯೋಜನೆಗೆ ಹೇಗೆ ಬಿಲ್ ಪಾವತಿಸಿದರು ಎಂದು ಪ್ರಶ್ನಿಸಿದರು. ಅಕ್ರಮ ಸಕ್ರಮದಲ್ಲಿ ಗೋಲ್ಮಾಲ್ ಆಗಿದೆ, ಭ್ರಷ್ಟಾಚಾರ ತುಂಬಿ ತುಳುಕಿದೆ, ನಾವು ತೆರಿಗೆ ಪಾವತಿಸಿದ ಹಣದಲ್ಲಿ ನಿರ್ಮಾಣಗೊಳ್ಳುವ ಕಾಂಕ್ರೀಟ್ ರಸ್ತೆಗಳು ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರ ಮನೆಗೆ ಮಾತ್ರ ಸಂಪರ್ಕ ಕಲ್ಪಿಸುತ್ತದೆ ಹೊರತು ಜನ ಸಾಮಾನ್ಯರ ಮನೆಗಲ್ಲ ಇಂತಹ ರಸ್ತೆಗಳು ರಾಯಿ, ವಾಮದಪದವುಗಳಲ್ಲಿ ಇದೆ ಎಂದು ಆರೋಪಿಸಿದರು. ಕುಕ್ಕಿಪಾಡಿ ಬಿಜೆಪಿ ಸ್ಥಳೀಯ ಗ್ರಾ.ಪಂ. ಸದಸ್ಯೆ ಜಾಗ ಅತಿಕ್ರಮಣ ಮಾಡಿ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ್ದಾರೆ, ಬಿಜೆಪಿ ಗ್ರಾ.ಪಂ. ಸದಸ್ಯನಿಗೆ ಬೇರೊಂದು ಗ್ರಾಮದಲ್ಲಿ ೩ ಎಕ್ರೆ ಅಕ್ರಮ ಸಕ್ರಮ ಜಮೀನು ಮಂಜೂರಾಗಿದೆ, ಜೀವಂತ ಇಲ್ಲದ ವ್ಯಕ್ತಿಯ ಹೆಸರಿನಲ್ಲಿ ೪ ಜಮೀನು ಮಂಜೂರು ಆಗಿದೆ ಎಂದು ಆರೋಪ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು ಮಾತನಾಡಿ ಸಾಮಾಜಿಕ ಜಾಲಾತಾಣದಲ್ಲಿ ತಪ್ಪುಗಳಾದಾಗ ಪೊಲೀಸ್ ಇಲಾಖೆ ಎಲ್ಲರಿಗೂ ಏಕರೀತಿ ಕ್ರಮವನ್ನು ಜರುಗಿಸಬೇಕು, ತಾರತಮ್ಯ ಇಲ್ಲದೆ ಕ್ರಮ ಕೈಗೊಳ್ಳಬೇಕು ಅದನ್ನು ಬಿಟ್ಟು ಏಕಪಕ್ಷೀಯ ಕ್ರಮ ಜರುಗಿಸಬಾರದು ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಮನೋಹರ ನೇರಂಬೋಳು ಉಪಸ್ಥಿತರಿದ್ದರು.
—