ಬಂಟ್ವಾಳ: ಯುವಕ ವೃಂದ ಮಂಚಿ ಕಟ್ಟೆ ಇದರ ಬೆಳ್ಳಿಹಬ್ಬ ಸಂಭ್ರಮದ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಯುವಕ ವೃಂದದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಭಾನುವಾರ ವಿಜ್ರಂಭಣೆಯಿಂದ ನಡೆಯಿತು.
ಮಂಚಿಕಟ್ಟೆಯಲ್ಲಿ ನಿರ್ಮಾಣಗೊಂಡ ಸಂಘದ ನೂತನ ಕಟ್ಟಡವನ್ನು ಡಾ. ಎಂ. ಗೋಪಾಲ ಆಚಾರ್ ಮಂಚಿ ಹಾಗೂ ಮಿತ್ತಾಳ ರಘುನಾಥ ಆಚಾರ್ ಉದ್ಘಾಟಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಅವರು ಭೇಟಿ ನೀಡಿ ಶುಭ ಹಾರೈಸಿದರು. ಮೋಂತಿಮಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೋಕ್ತೇಸರ ಸತೀಶ್ಚಂದ್ರ ಎಸ್.ಆರ್. ಮತ್ತಿತರ ಗಣ್ಯರು ದೀಪ ಪ್ರಜ್ವಲಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸತೀಶ್ಚಂದ್ರ ಎಸ್.ಆರ್. ಮಾತನಾಡಿ ನಮ್ಮ ದೇಶದಲ್ಲಿ ಶೇ.೫೦ ಕ್ಕಿಂತ ಹೆಚ್ಚು ಯುವಕರಿದ್ದಾರೆ. ಇಂದು ದೇಶ ಸಾಧನೆಯ ಹಾದಿಯಲ್ಲಿ ಮುಂದುವರಿಯಲು ಯುವಕರು ಕಾರಣ ಎಂದರು. ಪ್ರಕೃತಿಯನ್ನು ಆರಾಧಿಸುವ ಮರ ಗಿಡಗಳಲ್ಲೂ ಆಧ್ಯಾತ್ಮಿಕತೆಯನ್ನು ಕಾಣುವ ಜಗತ್ತಿನ ಏಕೈಕ ದೇಶ ಭಾರತ ಎಂದು ತಿಳಿಸಿದ ಅವರು ಯುವಕರು ಸಾಮಾಜಿಕ ಜವಾಬ್ದಾರಿ ಯಿಂದ ಜೀವಿಸಿದಾಗ ಸಮಾಜದ ಅಭಿವೃದ್ದಿಯಾಗುತ್ತದೆ. ಎಂದು ತಿಳಿಸಿದರು. ಒಳ್ಳೆಯ ಕೆಲಸಕ್ಕೆ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ಮಿತ್ತಾಳ ಕುಟುಂಬಸ್ಥರು ಸ್ಥಳ ದಾನ ಮಾಡಿದ್ದಾರೆ. ಅದರಲ್ಲಿ ಯುವಕ ಸಂಘದ ಸುಂದರ ಕಟ್ಟಡ ನಿರ್ಮಾಣ ಗೊಂಡಿದೆ ಎಂದರು.
ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಉಮನಾಥ ರೈ ಮೇರಾವು ಮಾತನಾಡಿ ಇದೊಂದು ಸ್ಮರಣೀಯ ಕಾರ್ಯಕ್ರಮ. ಯುವಕವೃಂದ ಮಂಚಿಕಟ್ಟೆಯ ಸದಸ್ಯರು ೨೫ ವರ್ಷಗಳ ಸಾಧನೆಯ ಜೊತೆಗೆ ಸಮಾಜಮುಖಿ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಯುವಶಕ್ತಿ ರಾಷ್ಟ್ರ ಶಕ್ತಿ. ಮಂಚಿ ಪರಿಸರದ ಯುವಕರ ಶಕ್ತಿಯನ್ನು ಸದ್ಬಳಕೆ ಮಾಡಿ ಸಮಾಜಮುಖಿಯಾಗಿಸಿದಾಗ ಊರಿನ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಸ್ಥಳಧಾನಿ ರಘುನಾಥ ಆಚಾರ್ ಶುಭ ಕೋರಿದರು. ಡಾ. ಎಂ. ಗೋಪಾಲ ಆಚಾರ್ ಮಂಚಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಂಚಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾ ಎಸ್. ಕಾಮತ್, ಮಂಚಿಯ ಶ್ರೀ ಅರಸು ಕುರಿಯಾಡಿತ್ತಾಯ ಮಾಡದ ಗಡಿಪ್ರಧಾನರಾದ ರವಿಶೆಟ್ಟಿ ಯಾನೆ ಸಾವಿರದ ಕುಂಞಳ, ನೂಜಿಬೈಲು ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ನಾರಾಯಣ ಭಟ್ ನೂಜಿಬೈಲು, ಉದ್ಯಮಿ ರವಿ ಪೂಜಾರಿ, ಮಂಚಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ರೈ ಮೇರಾವು, ಯುವಕ ಮಂಡಲ ಮಂಚಿ ಕಟ್ಟೆಯ ಅಧ್ಯಕ್ಷ ಚಂದ್ರಶೇಖರ್ ನಾಯಕ್ ಮೋಂತಿಮಾರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಸ್ಥಳಧಾನಿಗಳಾದ ಮಿತ್ತಾಳ ಮನೆತನದ ರಘುನಾಥ ಆಚಾರ್, ಡಾ. ಎಂ. ಗೋಪಾಲ ಆಚಾರ್, ಪ್ರಗತಿಪರ ಕೃಷಿಕ ರಾಘವ ಆಚಾರ್ ಮಿತ್ತಾಳ, ನಿವೃತ್ತ ಸೈನಿಕ, ಉದಯ ಕುಮಾರ್ ನೂಜಿ, ಮೆಸ್ಕಾಂ ಉದ್ಯೋಗಿ ಅಣ್ಣಪ್ಪ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ಸ್ವಾಗತಿಸಿದರು. ಶ್ರೀ ಅರಸು ಕುರಿಯಾಡಿತ್ತಾಯ ಮಾಡದ ಕಾರ್ಯದರ್ಶಿ ರಮೇಶ್ ರಾವ್ ಪತ್ತುಮುಡಿ ವಂದಿಸಿದರು. ಪುಷ್ಪರಾಜ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಬೆಳ್ಳಿ ಹಬ್ಬ ಸಂಭ್ರಮದ ಪ್ರಯುಕ್ತ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ೬ ಗಂಟೆಗೆ ನೂತನ ಕಟ್ಟಡದಲ್ಲಿ ಗಣಹೋಮ ನಡೆಯಿತು. ಬಳಿಕ ಮಂಚಿಕಟ್ಟೆಯ ಅಶ್ವಥ ಕಟ್ಟೆಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಸಾಮೂಹಿಕ ಸತ್ಯನಾರಾಯಣ ಪೂಜೆ ನಡದು ಪ್ರಸಾದ ವಿತರಿಸಲಾಯಿತು. ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.