
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ, ಮುಂದಿನ ಅವಧಿಯಲ್ಲೂ ಜನತೆಯ ಪ್ರತಿಯೊಂದು ಕೆಲಸಗಳನ್ನು ಮಾಡಲು ಶಕ್ತವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಬಿಜೆಪಿ ಬಂಟ್ವಾಳ ಮಂಡಲದ ಪೇಜ್ ಪ್ರಮುಖರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ನಾಲ್ಕುವರೆ ವರ್ಷಗಳಲ್ಲಿ 2 ಸಾವಿರ ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಮಾಡಿದ್ದು ಎಲ್ಲವೂ ಪಾರದರ್ಶಕವಾಗಿದೆ ಎಂದ ಅವರು ದಿನಕ್ಕೆ ಒಂದರಂತೆ 1504 ರಸ್ತೆಗಳನ್ನು ಮಾಡಲಾಗಿದೆ. ವಿದ್ಯೆ ಮತ್ತು ಆರೋಗ್ಯ ರಕ್ಷಣೆ ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದ್ದು, ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ಷೇತ್ರದಲ್ಲಿ ಒಟ್ಟು ೪೮ ಕೋಟಿಗೂ ಮಿಕ್ಕಿದ ಹಣ ವಿವಿಧ ಯೋಜನೆ ಯಲ್ಲಿ ಕೃಷಿಕರ ಖಾತೆಗೆ ಬಂದಿದೆ. ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾ ನಿಧಿ ಫಲಾನುಭವಿಗಳಾಗಿದ್ದಾರೆ.

ಪ್ರತಿಯೊಬ್ಬ ಬಿಪಿಎಲ್ ಕಾರ್ಡ್ ದಾರ ಮಹಿಳೆಯರ ಬ್ಯಾಂಕ್ ಖಾತೆಗೆ ಎಪ್ರಿಲ್ ನಿಂದ ತಲಾ ಒಂದು ಸಾವಿರದಂತೆ ಹಣ ನೀಡುವ ಘೋಷಣೆಯನ್ನು ಅಸೆಂಬ್ಲಿಯಲ್ಲಿ ಮಾಡಲಾಗಿದೆ ಎಂದರು.
ಚುನಾವಣೆಯ ಪೂರ್ವತಯಾರಿಯ ಹಿನ್ನೆಲೆಯಲ್ಲಿ ಪೇಜ್ ಪ್ರಮುಖರಿಗೆ ಜವಬ್ದಾರಿಯ ಬಗ್ಗೆ ಮಾಹಿತಿ ನೀಡಲು ಈ ಸಭೆಯನ್ನು ಆಯೋಜಿಸಿದೆ. ನಮ್ಮ ನಮ್ಮ ಬೂತ್ನ ಬಗ್ಗೆ ಮತದಾರರ ಬಗ್ಗೆ ಚಿಂತಿಸಿ ಬಿಜೆಪಿ ಪರವಾಗಿ ಮತದಾನ ಮಾಡುವಂತೆ ಮಾಡಿದರೆ, ಬಿಜೆಪಿ ಗೆಲುವು ಸಾಧಿಸುದು ಗ್ಯಾರಂಟಿ ಎಂದು ಅವರು ಭರವಸೆ ನೀಡಿದರು.
ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ರವಿಚಂದ್ರ ಮಿಜಾರ್, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್, ರಾಜ್ಯ ಒಳಚರಂಡಿ ಹಾಗೂ ಕುಡಿಯುವ ನೀರು ಸರಬರಾಜು ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್ ಉಪಸ್ಥಿತರಿದ್ದರು.
ಮಂಡಲದ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ಸ್ವಾಗತಿಸಿದರು. ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಕಾರ್ಯಕ್ರಮ ನಿರೂಪಿಸಿದರು.
—
