ಬಂಟ್ವಾಳ: ಪಕ್ಷ ಅವಕಾಶ ನೀಡಿದರೆ ಈ ಬಾರಿ ಕೊನೆಯ ಸ್ಪರ್ಧೆ ಮಾಡುತ್ತೇನೆ. ಶಾಸಕನಾಗಿ ಆಯ್ಕೆಯಾದರೆ ಮುಂದಿನ ಐದು ವರ್ಷದಲ್ಲಿ ಅದ್ಭುತ ಕೆಲಸ ಮಾಡಿ ತೋರಿಸುತ್ತೇನೆ. ಅಧಿಕಾದಲ್ಲಿದ್ದಾಗ ಹೇಳಿದ್ದನ್ನೇ ಮಾಡಿದ್ದೇನೆ, ಮಾಡಿದ್ದನೇ ಹೇಳಿದ್ದೇನೆ. ನನ್ನ ಬಟ್ಟೆಯಷ್ಟೇ ಮನಸ್ಸು ಕೂಡ ಶುಭ್ರವಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ನಾನು ಚುನಾವಣೆಯಲ್ಲಿ ಸ್ಪರ್ಧಿಸಲೆಂದು ಬಂಟ್ವಾಳಕ್ಕೆ ಬಂದವನಲ್ಲ. ಬಂಟ್ವಾಳ ತಾಲೂಕಿನಲ್ಲಿಯೇ ಬೆಳೆದವನು. ಪಕ್ಷದ ವಿವಿಧ ಹುದ್ದೆಯಲ್ಲಿ ಕೆಲಸ ಮಾಡಿದ ಹಿನ್ನಲೆಯಲ್ಲಿ ನನಗೆ ಪಕ್ಷ ಅವಕಾಶ ನೀಡಿದಾಗ ಅವಕಾಶವನ್ನು ನಾನು ಸರಿಯಾಗಿ ಉಪಯೋಗ ಮಾಡಿದ್ದೇನೆ. ಕಳೆದ ಅವಧಿಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕನಾಗಿದ್ದ ೫ ಸಾವಿರ ಕೋಟಿಗೂ ಮಿಕ್ಕಿದ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದರು.
ನಮ್ಮ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗುತ್ತಿದೆ ಎನ್ನುವ ಆರೋಪ ನಮ್ಮ ಪಕ್ಷದ ಶಾಸಕರೇ ಮಾಡುತ್ತಿದ್ದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಮಿನಿ ವಿಧಾನ ಸೌಧ, ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣ, ಡಿಪೋ, ಆರ್ಟಿಓ ಕಚೇರಿ, ಟ್ರಾಫಿಕ್ ಪೊಲೀಸ್ ಠಾಣೆ, ಡಿವೈಎಸ್ಪಿ ಕಚೇರಿ, ಅಂಬೇಡ್ಕರ್ ಭವನ, ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆಯವರೆಗೆ ರಾ. ಹೆದ್ದಾರಿ ಅಭಿವೃದ್ಧಿ, ಪಶ್ಚಿಮ ವಾಹಿನಿ ಯೋಜನೆಯಡಿ ಡ್ಯಾಂ ನಿರ್ಮಾಣ ಮೊದಲಾದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತಂದಿದ್ದೇನೆ. ಅನೇಕ ಸರ್ಕಾರಿ ಶಾಲೆಗಳಿಗೆ ಕೊಠಡಿ ನಿರ್ಮಾಣ, ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ನಿರ್ಮಾಣ, ಪಂಚಾಯತಿಗಳಲ್ಲಿ ರಾಜೀವ ಗಾಂಧಿ ಸಮುದಾಯ ಭವನ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಎಂದರು. ಬಂಟ್ವಾಳ ಸರ್ಕಾರಿ ಆಸ್ಪತ್ರೆಯನ್ನು ೧೦೦ ಬೆಡ್ನ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿದ್ದು, ಸಿಆರ್ಎಫ್ ನಲ್ಲಿ ಅತ್ಯಧಿಕ ಹೆಚ್ಚು ರಸ್ತೆಗಳ ನಿರ್ಮಾಣ, ಪುರಸಭಾ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಕಾಂಕ್ರೀಟ್ ರಸ್ತೆ ನಿರ್ಮಾಣ, ಕುಡಿಯುವ ನೀರಿನ ಯೋಜನೆ, ಒಳಚರಂಡಿ ಯೋಜನೆ, ಪಂಜೆ ಮಂಗೇಶ್ ರಾವ್ ಭವನ, ಅಂಬೇಡ್ಕರ್ ಭವನ, ಸೌಹಾರ್ದ ಸೇತುವೆ, ಬೆಂಜನಪದವಿನಲ್ಲಿ ಕ್ರೀಡಾಂಗಣಕ್ಕೆ ಚಾಲನೆ, ಕಾರಿಂಜೇಶ್ವರ, ಪೊಳಲಿ, ನಿಟಿಲೇಶ್ವರ ದೇವಸ್ಥಾನ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ನಮ್ಮ ಅವಧಿಯಲ್ಲಿ ಆಗಿದೆ ಎಂದರು.
ಯಾರೋ ಮಾಡಿದ ಅಭಿವೃದ್ಧಿ ಕಾರ್ಯ ನನ್ನದು ಎನ್ನುವಂತಹ ಸಣ್ಣ ವ್ಯಕ್ತಿ ನಾನಲ್ಲ, ಇದ್ದ ರಸ್ತೆಗೆ ಡಾಮಾರು ಹಾಕಿದರೆ ಅದು ದೊಡ್ಡ ಸಾಧನೆಯಲ್ಲ ಎಂದ ಅವರು ಅಪಪ್ರಚಾರದ ಮೂಲಕ ನನಗೆ ಕಳೆದ ಬಾರಿ ಸೋಲಾಗಿದೆ, ಆದರೆ ಈ ಬಾರಿ ಜನರಿಗೆ ಅದು ಮನವರಿಕೆಯಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷ ಅನ್ನಭಾಗ್ಯ, ಬಡವರಿಗೆ ನಿವೇಶನ ಹಂಚಿಕೆ, ೯೪ ಸಿ ಯೋಜನೆ ಹೀಗೆ ಅನೇಕ ಜನಪರವಾದ ಯೋಜನೆಗಳನ್ನು ಜಾರಿಗೊಳಿಸಿದ್ದಲ್ಲದೆ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದೆ ಎಂದರು.
ಗ್ರಾಮ ಗ್ರಾಮಕ್ಕೆ ರಥಯಾತ್ರೆ:
ನನ್ನ ಅಧಿಕಾರ ಅವಧಿಯಲ್ಲಿ ಆಗಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಪ್ರತೀ ಗ್ರಾಮಗಳಿಗೂ ರಥಯಾತ್ರೆ ನಡೆಸಲು ಯೋಜನೆ ರೂಪಿಸಲಾಗಿದೆ.
ಮಾ.೧೦ ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಿಂದ ರಥಯಾತ್ರೆ ಪ್ರಾರಂಭಗೊಳ್ಳಲಿದೆ. ಪ್ರತಿ ದಿನ ಸಂಜೆ ಸಾರ್ವಜನಿಕ ಸಭೆ ನಡೆಯಲಿದ್ದು ೧೪ ದಿನಗಳ ಕಾಲ ರಥ ಸಂಚರಿಸಲಿದೆ. ಈ ಸಂದರ್ಭ ರಾಜ್ಯ ನಾಯಕರು ರಥಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಕ್ಷದ ಪ್ರಮುಖರಾದ ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲಿಯಾನ್, ಅಬ್ಬಾಸ್ ಅಲಿ, ವೆಂಕಪ್ಪ ಪೂಜಾರಿ, ರಮೇಶ್ ನಾಯಕ್ ರಾಯಿ, ಸುರೇಶ್ ಜೋರಾ, ಜಗದೀಶ ಕೊಯಿಲ, ಜನಾರ್ದನ ಚೆಂಡ್ತಿಮಾರ್ ಮೊದಲಾದವರು ಉಪಸ್ಥಿತರಿದ್ದರು.