ಬಂಟ್ವಾಳ: ಇಲ್ಲಿನ ಬಂಟ್ವಾಳ ಬೈಪಾಸ್ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘ ನಿ. ಬಂಟ್ವಾಳ ಇದರ ಬಾಡಿಗೆ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದ ಮುಡಿಪು ಶಾಖೆಯನ್ನು ಮುಡಿಪುವಿನ ಶಂಕರಿ ಕಾಂಪ್ಲೆಕ್ಸ್ನಲ್ಲಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಿದ್ದು ಇದರ ಉದ್ಘಾಟನಾ ಸಮಾರಂಭ ಫೆ. 12 ರಂದು ಆದಿತ್ಯವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪಪ್ರಜ್ವಲನೆಗೈದು ಆಶೀರ್ವಚನ ನೀಡುವರು, ವಿರೋಧ ಪಕ್ಷದ ಉಪನಾಯಕ, ಮಂಗಳೂರು ಶಾಸಕ ಯು.ಟಿ.ಖಾದರ್ ಸ್ಥಳಾಂತರಿತ ಶಾಖೆಯ ಸ್ವಂತ ಕಟ್ಟಡವನ್ನು ಉದ್ಘಾಟಿಸುವರು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಭದ್ರತಾ ಕೊಠಡಿ ಉದ್ಘಾಟಿಸುವರು, ಸಂಘದ ಅಧ್ಯಕ್ಷ ಸುರೇಶ್ ಕುಲಾಳ್ ಅಧ್ಯಕ್ಷತೆ ವಹಿಸುವರು, ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಕಂಪ್ಯೂಟರ್ ಉದ್ಘಾಟಿಸುವರು, ಅಮ್ಮೆಂಬಳ ಸೇವಾ ಸಹಕಾರಿ ಸಂಘದ ನಿ. ಅಧ್ಯಕ್ಷ ಟಿ.ಜೆ. ರಾಜರಾಮ ಭಟ್ ಸೇಫ್ ಲಾಕರ್ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಕುರ್ನಾಡು ಗ್ರಾ.ಪಂ. ಅಧ್ಯಕ್ಷ ಗಣೇಶ್ ನಾಯ್ಕ್ ಮತ್ತಿತರ ಗಣ್ಯರು ಭಾಗವಹಿಸುವರು.
ಅದೇ ದಿನ ಸಂಘದ ಸಂಸ್ಥಾಪಕರಾದ ಡಾ| ಅಮ್ಮೆಂಬಳ ಬಾಳಪ್ಪನವರ ಜನ್ಮ ಶತಾಬ್ದಿಯ ಸ್ಮರಣಾರ್ಥ 2022-23 ನೇ ಸಾಲಿನ ಡಾ| ಅಮ್ಮೆಂಬಳ ಬಾಳಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ದೈವಗಳ ಮೂಲ್ಯಣ್ಣರಾಗಿ ದೈವ ಸೇವೆಯ ಕಾಯಕವನ್ನು ಕಳೆದ 47 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ದೈವದ ಮೂಲ್ಯಣ್ಣ ಎಂದು ಪ್ರಸಿದ್ದ ಪಡೆದಿರುವ ಬಾಲಕೃಷ್ಣ ಸಾಲ್ಯಾನ್ ಅವರಿಗೆ ನೀಡುವುದಾಗಿ ತಿಳಿಸಿದರು.
ಕೇವಲ 131 ಸದಸ್ಯರಿಂದ 22620 ರೂ. ಪಾಲು ಬಂಡವಾಳದೊಂದಿಗೆ ಆರಂಭಗೊಂಡ ಈ ಸಹಕಾರಿ ಸಂಘವು ಪ್ರಸ್ತುತ ಮೂರನೇ ತ್ರೈಮಾಸಿಕದ ಅಂತ್ಯಕ್ಕೆ ಒಟು 7597 ಸದಸ್ಯರಿದ್ದು ಪಾಲು ಬಂಡವಾಳ ರೂ. 7.70 ಕೋಟಿ, ಠೇವಣಾತಿಗಳು ರೂ. 193.96 ಕೋಟಿ, ನಿಧಿಗಳು 12.89 ಕೋಟಿ, ವಿನಿಯೋಗಗಳು 64.41 ಕೋಟಿ, ಸಾಲಗಳು ರೂ. 156.29 ಕೋಟಿ, ಸಂಘದ ದುಡಿಯುವ ಬಂಡವಾಳ ರೂ. 218.60 ಕೋಟಿ ಆಗಿದೆ ಎಂದು ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಪದ್ಮನಾಭ ವಿ., ಸದಸ್ಯರಾದ, ಜನಾರ್ದನ ಕುಲಾಲ್ ಬೊಂಡಾಲ, ಅರುಣ್ ಕುಮಾರ್ ಕೆ. ರಮೇಶ್ ಸಾಲ್ಯಾನ್ ಸಂಚಯಗಿರಿ, ನಾಗೇಶ್ ಬಾಳೆಹಿತ್ಲು, ರಮೇಶ್ ಸಾಲ್ಯಾನ್ ಕೈಕುಂಜೆ , ಜಗನ್ನಿವಾಸ ಗೌಡ, ಪ್ರಧಾನ ವ್ಯವಸ್ಥಾಪಕ ಭೋಜಮೂಲ್ಯ, ಸಹಾಯಕ ವ್ಯವಸ್ಥಾಪಕ ಮೋಹನ್ ಉಪಸ್ಥಿತರಿದ್ದರು.