ಬಂಟ್ವಾಳ: ಕಾಡಬೆಟ್ಟು ಗ್ರಾಮದ ಪಿಲಿಂಗಾಲು ಶ್ರೀ ಗಾಯತ್ರಿ ದೇವಸ್ಥಾನದಲ್ಲಿ ಬೆಳಿಗ್ಗೆ 9.25ಕ್ಕೆ ಶ್ರೀ ಗಾಯತ್ರಿ ದೇವಿಗೆ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ ನ್ಯಾಸ ಪೂಜೆ, ಗಾಯತ್ರಿ ಯಾಗ, ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಗಾಯತ್ರಿ ಮಂತ್ರ, ಮಂತ್ರಗಳಿಗೆ ರಾಜನಿದ್ದಂತೆ. ಗಾಯತ್ರೀ ಮಂತ್ರದಲ್ಲಿ 24 ಅಕ್ಷರಗಳಿವೆ. ಮನುಷ್ಯನ ಬದುಕಿನ ಲೆಕ್ಕಚಾರದದಲ್ಲೂ 24 ಅಂಶಗಳಿದ್ದು ಅದನ್ನು ಮೀರಿದಾಗ ಅದು ಆಧ್ಯಾತ್ಮ ಸಾಧನೆಯಾಗುತ್ತದೆ ಎಂದರು. ಕಷ್ಟಗಳನ್ನು ಗೋಡೆಗಳನ್ನಾಗಿ ಮಾಡುವ ಬದಲು ಕಷ್ಟಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿದಾಗ ಸಾಧನೆ ಮಾಡಲು ಸಾಧ್ಯವಿದೆ.ಬದುಕು ಸಾರ್ಥಕವಾಗಲು ಶ್ರದ್ದಾಕೇಂದ್ರಗಳು ಬೇಕು. ಗಾಯತ್ರಿ ದೇವಸ್ಥಾನ
ನಿರ್ವಿಘ್ನವಾಗಿ ಬೆಳೆದು, ಬೆಳಗುತ್ತಾ ಬರಲಿ ಎಂದು ಆಶಿಸಿದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ ವೇದಗಳಿಗೆ ತಾಯಿ ಗಾಯತ್ರಿ. ಅವಳ ಮಂತ್ರವನ್ನು ಗಾಯನ ಮಾಡುವವರನ್ನು ತಾಯಿ ರಕ್ಷಿಸುತ್ತಾಳೆ. ವೇದ ಎನ್ನುವ ಪದದ ಅರ್ಥ ಜ್ಞಾನ. ಜಗತ್ತಿಗಾಗಿ ಪ್ರಾರ್ಥಿಸುವ ಮನುಕುಲದ ಪ್ರಾರ್ಥನೆಯೇ ಗಾಯತ್ರಿ ಮಂತ್ರ. ವೇದಗಳ ಮೂಲ ಸಾರ ಇರುವುದು ಗಾಯತ್ರಿ ಮಂತ್ರದಲ್ಲಿ. ಶಕ್ತಿಯ ಮೂಲ ಬೆಳಕು, ಬೆಳಕಿನ ಆರಾಧನೆಯೇ ತಾಯಿ ಗಾಯತ್ರಿ. ಆದ್ದರಿಂದ ಬೇಕಾದ ಎಲ್ಲವನ್ನು ಕೊಡುವ ಶಕ್ತಿ ಗಾಯತ್ರಿ ಮಂತ್ರಕ್ಕಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಮಾಧವ ಮಾವೆ,
ಜಿ.ಪಂ. ಮಾಜಿ ಸದಸ್ಯೆ ಕಮಲಾಕ್ಷಿ ಪೂಜಾರಿ,
ಕಣ್ಣೂರು ನಾರಾಯಣ ಸಪಲ್ಯ, ದಿನೇಶ್ ಎಣೆಕಲ
ರತ್ನಕುಮಾರ್ ಚೌಟ, ದೇವಸ್ಥಾನದ ಧರ್ಮದರ್ಶಿ ಕೆ.ಎಸ್. ಪಂಡಿತ್, ಉದ್ಯಮಿ ಪ್ರಕಾಶ್ ಉಡುಪ ಬೆಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಘು ಸಪಲ್ಯ ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ. ತುಂಗಪ್ಪ ಬಂಗೇರ ಸ್ವಾಗತಿಸಿದರು, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಕಲ್ಲಡ್ಕ ಪ್ರಾಸ್ತವಿಕವಾಗಿ ಮಾತನಾಡಿದರು. ದಾಮೋದರ ಶರ್ಮ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ದೇವಸ್ಥಾನಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.