ಬಂಟ್ವಾಳ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದೂರದೃಷ್ಟಿಯ ಯೋಜನೆಯಾದ ಸ್ಕಿಲ್ ಇಂಡಿಯಾ ಮೂಲಕ ನವಪೀಳಿಗೆಗೆ ವೃತ್ತಿಸಂಬಂಧ ಕೋರ್ಸ್ ಗಳನ್ನು ಮಾಡಲು ಪ್ರೇರೇಪಣೆ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಸಲಹೆ ನೀಡಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ಅವರು ಕೇಂದ್ರದ ಸ್ಥಾಪಕ ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರ ಚಿಂತನೆಗಳ ಮೂಲಕ ಸಂಸ್ಕಾರಯುತವಾದ ಶಿಕ್ಷಣ ವ್ಯವಸ್ಥೆಯನ್ನು ನೀಡಲಾಗುತ್ತಿದೆ ಎಂದು ಶ್ಲಾಘಿಸಿದರು. ಶೈಕ್ಷಣಿಕವಾಗಿಯಷ್ಟೇ ಅಲ್ಲ, ಸಂಸ್ಕಾರಯುತವಾಗಿ ಬೆಳೆಯಲು ಹಾಗೂ ರಾಷ್ಟ್ರೀಯ ವಿಚಾರಧಾರೆಯುಳ್ಳ ನಾಗರಿಕರಾಗಿ ರೂಪುಗೊಳ್ಳಲು ನವಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕಾರ್ಯ ಇಂದು ಆಗಬೇಕಾಗಿದೆ ಎಂದರು.
ಇದಕ್ಕೂ ಮೊದಲು ವಿದ್ಯಾಕೇಂದ್ರದ ವಿವಿಧ ಚಟುವಟಿಕೆಗಳನ್ನು ಗಮನಿಸಿದ ಡಾ.ಪ್ರಮೋದ್ ಸಾವಂತ್, ಬಳಿಕ ಪಿಯು ವಿದ್ಯಾರ್ಥಿಗಳ ದೀಪಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಮಂಗಳೂರು ದಕ್ಷಿಣ ಶಾಸಕ ಬಿ. ವೇದವ್ಯಾಸ ಕಾಮತ್, ಪ್ರಸಾದ್ ನೇತ್ರಾಲಯದ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಕೂಡ್ಲು, ಹಂಪಿ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಸ್.ಸಿ.ರಮೇಶ್, ಉದ್ಯಮಿಗಳಾದ ಬಾಲಕೃಷ್ಣ ಭಂಡಾರಿ, ನವೀನ್ ಹೆಗ್ಡೆ ಮುಂಬೈ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಸಂಚಾಲಕ ವಸಂತ ಮಾಧವ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಿಯಾಂಕಾ ಸ್ವಾಗತಿಸಿದರು. ವೆಂಕಟೇಶ್ ವಂದಿಸಿದರು. ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.