ಬಂಟ್ವಾಳ: ಸಂಸ್ಕೃತಿ ಮತ್ತು ಸಂಸ್ಕಾರದ ವಿಕೃತಿಯಾದಾಗ ಸಮಾಜ ಅಂಧಕಾರದತ್ತ ಸಾಗುತ್ತದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ ಹೇಳಿದರು.
ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ನೂತನ ರಥ ಸಮರ್ಪಣೆ ಹಾಗೂ ಜಾತ್ರಾಮಹೋತ್ಸವದ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು
ಮಗು ಜನಿಸಿದಾಗ ತಾಯಿ ಪುನರ್ ಜನ್ಮ ಪಡೆವಷ್ಟು ನೋವು ಅನುಭವಿಸಿದರೂ ಕೂಡ ಮಗುವಿನ ನಗುವನ್ನು ಕಂಡು ತನ್ನ ಎಲ್ಲಾ ನೋವುಗಳನ್ನು ಮರೆತು ಆನಂದ ಪಡುತ್ತಾಳೆ. ಆದ್ದರಿಂದ ಅರಿವಿನ ಮೊದಲ ಗುರು ತಾಯಿ ಎಂದು ತಿಳಿಸಿದರು. ದೇವಸ್ಥಾನ ಪ್ರಭಾವಲಯ, ಪಾವಿತ್ರ್ಯ ವಾದ ಪ್ರದೇಶ, ದೇವಸ್ಥಾನಕ್ಕೆ ಯಾಕೆ ಬರಬೇಕು, ಅಲ್ಲಿ ಹೇಗಿರಬೇಕು ಎನ್ನುವ ಬಗ್ಗೆ ಮಕ್ಕಳಿಗೆ ತಂದೆ ತಾಯಿ ತಿಳಿ ಹೇಳಬೇಕು. ತಂದೆ ತಾಯಿಯನ್ನು ದೇವರಂತೆ ಪೂಜಿಸುವ ಔದಾರ್ಯತೆ ಮಕ್ಕಳಲ್ಲಿ ಇರಬೇಕಾಗಿದೆ. ಇಂತಹ ಪ್ರಯತ್ನಗಳು ಶ್ರದ್ಧಾ ಕೇಂದ್ರದ ಮೂಲಕ ಆಗಬೇಕು ಎಂದ ಅವರು ಮಾತ್ಸರ್ಯ, ದೂಷಣೆಯನ್ನು ಬಿಟ್ಟು ಹಿಂದೂ ಸಮಾಜ ಒಗ್ಗಟ್ಟಾಗಬೇಕು ಎಂದರು.
ಕನ್ಯಾಡಿ ಕ್ಷೇತ್ರದ ಶ್ರೀ ಬ್ರಹ್ಮನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ ಆಂತರ್ಯವನ್ನು ಶುದ್ದಗೊಳಿಸಲು ಭಜನೆ, ಧ್ಯಾನ, ಸತ್ತಂಗದ ಮೂಲಕ ಸಾಧ್ಯವಿದೆ. ಬದುಕಿನಲ್ಲಿ ಭಗವಂತ ಹತ್ತಿರವಾಗಬೇಕಾದರೆ ಅನನ್ಯವಾಗಿ ಭಗವಂತನ ಚಿಂತನೆ ಮಾಡಬೇಕು, ನಮ್ಮೊಳಗಿನ ಶತ್ರುವನ್ನು ನಾಶ ಮಾಡದೆ ಹೊರಗಿನ ಶತ್ರುವಿನ ನಾಶ ಸಾಧ್ಯವಿಲ್ಲ ಎಂದು ತಿಳಿಸಿದರು.
ರಾಷ್ಟ್ರಸೇವಿಕಾ ಕಾರ್ಯಕಾರಿ ಸಮಿತಿ ಸದಸ್ಯೆ ಡಾ. ಕಮಲಾ ಪ್ರಭಾಕರ ಭಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಜಯಾನಂದ, ಪ್ರಮುಖರಾದ ಸುನೀತಾ ಸಿ. ಶೆಟ್ಟಿ ಶಂಬರಗುರಿ, ಸುಮತಿ ಎಸ್., ಖಂಡಿಗ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಮಪ್ರಸಾದ್ ಪೂಂಜ ಬರಂಗರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಲಯ ಸಂಚಾಲಕ ದಾಮೋದರ ಬಿ.ಎಂ. ಸ್ವಾಗತಿಸಿದರು, ಪ್ರಸಾದ ವಿತರಣೆ ಸಮಿತಿ ಸಂಚಾಲಕ ವಸಂತ ಪೆರಾಜೆ ವಂದಿಸಿದರು. ನಿವೃತ್ತ ಶಿಕ್ಷಕ ರಾಧಕೃಷ್ಣ ಅಡ್ಯಂತಾಯ ಕಾರ್ಯಕ್ರಮ ನಿರೂಪಿಸಿದರು. ಧಾರ್ಮಿಕ ಸಭಾ ಕಾರ್ಯಕ್ರಮಕ್ಕಿಂತ ಪೂರ್ವಭಾವಿಯಾಗಿ ಸಜೀಪಮಾಗಣೆಯ ತಂತ್ರಿ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ದೀಪಪೂಜನ ನಡೆಯಿತು