ಬಂಟ್ವಾಳ: ಮೇರಮಜಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಅಭಿವೃದ್ದಿ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಮಂಗಳೂರು ಶಾಸಕ ಯು.ಟಿ.ಖಾದರ್ ಬುಧವಾರ ಶಿಲಾನ್ಯಾಸ ನೆರವೇರಿಸಿದರು.
ಸ್ಥಳೀಯ ಜನರು ಹಾಗೂ ರೈತರ ಬಹುಬೇಡಿಕೆಯ ಮೇರಮಜಲುವಿನಿಂದ ಬಡ್ಡೂರು ಕಾನ ಸಂಪರ್ಕ ರಸ್ತೆ ಅಭಿವೃದ್ಧಿ, ಕಿರು ಸೇತುವೆ ನಿರ್ಮಾಣ, ಮಯ್ಯಾಡಿ ರಸ್ತೆ ಕಾಂಕ್ರೀಟ್ ಕಾಮಗಾರಿ, ಕುಟ್ಟಿಕಳ ರಸ್ತೆಗೆ ಡಾಮರೀಕರಣ ಸೇರಿದಂತೆ ವಿವಿಧ ರಸ್ತೆ ನಿರ್ಮಾಣ ಕೆಲಸಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭ ಶಾಸಕ ಯು.ಟಿ. ಖಾದರ್ ಮಾತನಾಡಿ ಮೇರಮಜಲಿನಿಂದ ಬಡ್ಡೂರು ಮೂಲಕ ಕಾನಕ್ಕೆ ಸಂಪರ್ಕಿಸುವ ರಸ್ತೆ ಈ ಭಾಗದ ಸ್ಥಳೀಯರು ಹಾಗೂ ರೈತರ ಬಹುಬೇಡಿಕೆಯ ರಸ್ತೆಯಾಗಿದೆ. ಈ ಭಾಗದ ಎಲ್ಲಾ ರಸ್ತೆಗಳು ಈಗಾಗಲೇ ಅಭಿವೃದ್ಧಿಯಾಗಿದ್ದು ಈ ಒಂದು ರಸ್ತೆ ಬಾಕಿ ಉಳಿದಿತ್ತು. ಆರಂಭದ ಹಂತದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಸಿ ಮುಂದಿನ ದಿನಗಳಲ್ಲಿ ಮುಖ್ತ ರಸ್ತೆಯ ಕೆಲಸ ನಡೆಸಿ ಅಡ್ಡರಸ್ತೆಗಳ ಅಭಿವೃದ್ಧಿಗೂ ಗಮನ ಹರಿಸುವುದಾಗಿ ತಿಳಿಸಿದರು. ಮೇರಮಜಲು ಗ್ರಾಮದಿಂದ ಮಲ್ಲೂರು ಗ್ರಾಮ ಸೇರಿದಂತೆ ಎರಡು ತಾಲೂಕುಗಳನ್ನು ಸಂಪರ್ಕಿಸುವ ರಸ್ತೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ರಸ್ತೆ ಕಾಂಕ್ರಿಟಿಕರಣವಾಗಿದ್ದು ಗ್ರಾಮೀಣ ಭಾಗದ ಈ ರಸ್ತೆಯನ್ನು ಮರು ಡಾಮಾರೀಕರಣಗೊಳಿಸುವುದಕ್ಕೆ ಅನುದಾನ ಬಿಡುಗಡೆಗೊಳಿಸಿರುವುದಾಗಿ ಅವರು ತಿಳಿಸಿದರು.
ಮೇರಮಜಲು ಗ್ರಾ.ಪಂ. ಸದಸ್ಯರಾದ ವೃಂದಾ ಪೂಜಾರಿ, ಫ್ರಾನ್ಸಿಸ್ ಮೆಂಡೋನ್ಸ್, ಅನಿಲ್ ಫೆರ್ನಾಂಡೀಸ್, ಅಶೋಕ್ ಪೂಜಾರಿ, ಸುಗಂಧಿ, ರೀಝಾ ಇರಾ ಗ್ರಾ.ಪಂ. ಸದಸ್ಯ ಅಬ್ದುಲ್ ರಝಾಕ್ ಕುಕ್ಕಾಜೆ, ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಜಿ.ಪಂ. ಎಂಜಿನೀಯರ್ ರವಿ, ಜಿ.ಪಂ. ಮಾಜಿ ಸದಸ್ಯ ಉಮ್ಮರ್ ಫಾರೂಕ್, ಗುತ್ತಿಗೆದಾರ ಅಬ್ದುಲ್ ಜಲೀಲ್, ಮಾಜಿ ಸದಸ್ಯೆ ಮಲ್ಲಿಕಾ ಮೊದಲಾದವರು ಉಪಸ್ಥಿತರಿದ್ದರು.