ಬಂಟ್ವಾಳ: ಸಂಬಂಧ, ಸಹಬಾಳ್ವೆ, ಸಹಯೋಗ, ಸಂಸ್ಕೃತಿ, ಸಂತತಿ, ಸಂಸ್ಕಾರ, ಸತ್ಕಾರ ಈ ೭ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೌಲ್ಯಯುತ ಕುಟುಂಬ ಜೀವನವನ್ನು ನಡೆಸಿದಾಗ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗದ ಕುಟುಂಬ ಪ್ರಭೋದಿನಿ ಪ್ರಮುಖ್ ಗಜಾನನ ಪೈ ಹೇಳಿದರು.
ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ನೂತನ ರಥ ಸಮರ್ಪಣೆ ಹಾಗೂ ಜಾತ್ರಾಮಹೋತ್ಸವದ ಪ್ರಯುಕ್ತ ನಡೆದ ದಂಪತಿ ಸಮಾವೇಶದಲ್ಲಿ ಸನಾತನ ಕುಟುಂಬ ಪದ್ದತಿಯ ಮೌಲ್ಯ ಮತ್ತು ಜವಾಬ್ದಾರಿಯ ಬಗ್ಗೆ ಅವರು ಮಾತನಾಡಿದರು. ಮನೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಕ್ಷಮತೆಯನ್ನು ದೇವರು ತಾಯಂದಿರಿಗೆ ನೀಡಿದ್ದಾನೆ. ತಾಯಿ ಮಾತೃಸ್ಥಾನದಲ್ಲಿ ಇದ್ದರೂ ಆಕೆಗೆ ಪೂರಕವಾದ ಅನುಕೂಲವನ್ನು ಒದಗಿಸಿಕೊಡುವ ಜವಬ್ದಾರಿ ಪುರುಷರದ್ದು ಎಂದು ತಿಳಿಸಿದರು.
ಒಡಿಯೂರು ಗುರುದೇವದತ್ತ ಸಂಸ್ಥಾನಂನ ಸಾಧ್ವಿ ಶ್ರೀ ಮಾತಾನಂದಮಯಿ
ದಂಪತಿ ಸಮಾವೇಶವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ವಿಶ್ವನಾಥ ಆಳ್ವ ಕಾಂತಾಡಿಗುತ್ತು ಅಧ್ಯಕ್ಷತೆ ವಹಿಸಿದ್ದರು.
ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್, ನರಿಕೊಂಬು ಶ್ರೀ ಸತ್ಯದೇವತಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೋಜ ಕೊಟ್ಟಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಅರುಣ್ ಕುಮಾರ್ ಕುಕ್ಕುದಕಟ್ಟೆ ಸ್ವಾಗತಿಸಿದರು, ಸುರೇಶ್ ಬಂಗೇರ ಆರ್ಯಾಪು ವಂದಿಸಿದರು. ಉಪನ್ಯಾಸಕ ದಾಮೋದರ ಇ. ನಿರೂಪಿಸಿದರು.