ಬಂಟ್ವಾಳ: ಗ್ರಾಮ ವಿಕಾಸ ಯಾತ್ರೆಯಲ್ಲಿ ಜನರ ಪ್ರೀತಿ ವಿಶ್ವಾಸವನ್ನು ನೋಡಿದಾಗ ಜೀವನದಲ್ಲಿ ಸಾರ್ಥಕತೆ ಸಿಕ್ಕಿದೆ. ಅಧಿಕಾರ ಬಂದು ಹೋಗುತ್ತದೆ. ಆದರೆ ಪಾದಯಾತ್ರೆಯ 11 ದಿನದಲ್ಲಿ ಹಿರಿಯರಾದಿಯಾಗಿ ಎಲ್ಲಾ ವರ್ಗದ ಜನರು ಪ್ರೀತಿ ನೀಡಿದಾಗ ಹೃದಯ ತುಂಬಿ ಬಂದಿದೆ. ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.
ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮ ವಿಕಾಸ ನಡಿಗೆ- ಗ್ರಾಮದೆಡೆಗೆ ಶಾಸಕರ ನಡಿಯ 11ನೇ ದಿನದ ಪಾದಯಾತ್ರೆಯ ಬಳಿಕ ಕುರಿಯಾಳ ದುರ್ಗಾನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಸ್ವಾರ್ಥ ರಹಿತವಾಗಿ ಪಕ್ಷ ಕಟ್ಟಿದವರು ನಮ್ಮ ಹಿರಿಯರು, ಈ ಪಕ್ಷ ಅಧಿಕಾರಕ್ಕೆ ಬರುವ ಕನಸು ಅವರು ಕಂಡಿರಲಿಲ್ಲ, ಆದರೆ ನಮ್ಮ ಜೀವಿತಾವಧಿಯಲ್ಕಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿರುವುದೇ ವಿಶೇಷ. ಬಿಜೆಪಿ ಪಕ್ಷ ಸಾಕಷ್ಟು ಕಾರ್ಯ ಮಾಡಿದೆ. 2 ಸಾವಿರ ಕೋಟಿಯ ಅಭಿವೃದ್ಧಿ ಕಾರ್ಯ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲೇ ಆಗಿದೆ. ಪಕ್ಷ ಸಂಘಟನೆಯಾಗಬೇಕು, ಯಾರು ನಿಂತರೂ ಬಿಜೆಪಿ ಗೆಲ್ಲುತ್ತದೆ ಎನ್ನುವ ಪರಿಸ್ಥಿತಿ ಇಲ್ಲಿ ನಿರ್ಮಾಣಬೇಕು ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ
ದೇಶದ ಚರಿತ್ರೆಯನ್ಮು ಅಧ್ಯಯನ ಮಾಡದೇ ಹೋದರೆ ಚರಿತ್ರೆಯನ್ನು ತಿಳಿಯಲು ಸಾಧ್ಯವಿಲ್ಲ. ಬ್ರಿಟಿಷರ ಗುಂಡಿಗೆ ಎದೆ ಕೊಟ್ಟಂತಹ, ಅಂಡಮಾನಿನ ಕಾಲಪಾನಿ ಶಿಕ್ಷೆಗೆ ಗುರಿಯಾದ ಒಬ್ಬ ಕಾಂಗ್ರೆಸಿಗನ ಹೆಸರು ಹೇಳಲಿ ಎಂದು ಸವಾಲು ಹಾಕಿದರು.ಗುಜರಾತಿನಲ್ಲಿ ಅಭಿವೃದ್ದಿ ಕಾರ್ಯ ಮಾಡಿದ, ಜಗತ್ತಿನ ಶ್ರೇಷ ನಾಯಕನಾಗಿ ಭಾರತವನ್ನು ಅಭಿವೃದ್ದಿಯ ಪಥದಲ್ಲಿ ಕೊಂಡೊಯ್ದ ಪ್ರಧಾನಿ ಮೋದಿಯನ್ನು ಹಿಟ್ಲರ್ ಎಂದು ಕರೆಯುತ್ತಾರೆ ಇದು ಸರಿಯೇ? ಎಂದ ಅವರು ರಾಮನನ್ನು ಎದುರು ಹಾಕಿಕೊಂಡ ರಾವಣನ ನಾಶ ಆಯಿತು, ಮುಂದಿನ ದಿನಗಳಲ್ಲಿ ರಾಮನನ್ನು ಎದುರು ಹಾಕಿಕೊಂಡ ಕಾಂಗ್ರೆಸ್ ನಾಶವಾಗುತ್ತದೆ ಎಂದು ಗುಡುಗಿದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ.ಮಾಜಿ ಸದಸ್ಯೆ ಕಮಲಾಕ್ಷಿ ಪೂಜಾರಿ, ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷ ಸುನೀಲ್ ಕಾಯರ್ ಮಾರ್, ಯಾತ್ರೆಯ ಸಹಸಂಚಾಲಕ ಸುದರ್ಶನ್ ಬಜ, ಗ್ರಾ.ಪಂ.ಸದಸ್ಯರಾದ ಯಶೋಧ, ಅಶ್ವಿನಿ ಶೆಟ್ಟಿ, ಶ್ರೀದೇವಿ, ಸುಹಾಸಿನಿ, ಬೂತ್ ಅಧ್ಯಕ್ಷರಾದ ಪ್ರದೀಪ್ ಮಾರ್ಲ ಕುಟಿಲ, ಸುರೇಂದ್ರ ಶೆಟ್ಟಿ ಪಾಪುದಡ್ಕ, ಸಹಸಂಚಾಲಕ ರೂಪೇಶ್ ಕುಟಿಲ ಉಪಸ್ಥಿತರಿದ್ದರು.
ಯಾತ್ರೆಯ ಸಂಚಾಲಕ ಬಿ.ದೇವದಾಸ್ ಶೆಟ್ಟಿ ಅವರು ಕ್ಷೇತ್ರದ ಅನುದಾನ, ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಿದರು.
ಕುರಿಯಾಳ ಶಕ್ತಿಕೇಂದ್ರದ ಸಂಚಾಲಕ ಹರೀಶ್ ಶೆಟ್ಟಿ ಪಡು ಸ್ವಾಗತಿಸಿದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.