ಬಂಟ್ವಾಳ: ಒಂದು ಸುಳನ್ನು ನೂರು ಬಾರಿ ಹೇಳುವ ಮೂಲಕ ಜನರ ದಿಕ್ಕುತಪ್ಪಿಸುವ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಅಂದು ಕಾಂಗ್ರೆಸನ್ನು ಮಹಾತ್ಮ ಗಾಂಧಿಯವರೇ ವಿಸರ್ಜನೆ ಮಾಡಲು ತಿಳಿಸಿದರೂ ಕೂಡ ವಿಸರ್ಜನೆ ಮಾಡಿರಲಿಲ್ಲ. ಈಗ ರಾಹುಲ್ ಗಾಂಧಿ ಕಾಂಗ್ರೆಸನ್ನು ವಿಸರ್ಜಿಸಲು ಪಣ ತೊಟ್ಡಿದ್ದಾರೆ. ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಕಾಂಗ್ರೆಸ್ ನಾಶವಾಗುತ್ತಿದೆ. ಕಾಂಗ್ರೆಸ್ ಪಕ್ಷ ನಿರ್ನಾಮ ಮಾಡಲು ರಾಹುಲ್ ದೇಶದ್ಯಂತ ಯಾತ್ರೆ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಪ್ಪಿಸಲು ಸಾದ್ಯವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ ಗ್ರಾಮ ವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 10ನೇ ದಿನದ ಪಾದಯಾತ್ರೆಯು ಸಮಾರೋಪವಾಗಿ ಕೊಯ್ಲ ಗ್ರಾಮದ ಮಾವಂತೂರು ಶ್ರೀ ದೇವಪ್ಪ ಶೆಟ್ಟಿ ವೇದಿಕೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
10 ಲಕ್ಷ ಕೋಟಿ ಹಗರಣ ಮಾಡಿರುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕನಸು ಕಾಣುತ್ತಿದೆ. ರಾಜ್ಯದ ಜನರಿಗೆ 200 ಯುನಿಟ್ ವಿದ್ಯುತ್ ಕೊಡುವುದಾಗಿ ಘೋಷಣೆ ಮಾಡಿದೆ. ಆದರೆ ರಾಜ್ಯದ ಜನ ಕಾಂಗ್ರೆಸ್ ನ ಪ್ಯೂಸ್ ಕಿತ್ತು ಹಾಕಿದ್ದಾರೆ ಎಂದರು. ವಿಜಯ ಸಂಕಲ್ಪ ಅಭಿಯಾನದ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಯನ್ನು ಮನೆ ಮನೆಗೆ ತಲುಪಿಸು ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಿಬೇಕು, ಹೊಸ ಸದಸ್ಯತ್ವ ನೋಂದಾವಣೆ ಮಾಡಬೇಕು, ಆಗ ಮುಂದಿನ ಚುನಾವಣೆಯಲ್ಲಿ 40 ಸಾವಿರ ಅಂತರದಲ್ಲಿ ರಾಜೇಶ್ ನಾಯ್ಕ್ ಗೆಲ್ಲಲು ಸಾಧ್ಯವಿದೆ ಎಂದರು. ಕಷ್ಟಕಾಲದಲ್ಲೂ ಬಿಜೆಪಿಯನ್ನು ಬಲಪಡಿಸುವ ಕಾರ್ಯ ಕರಾವಳಿಯಲ್ಲಿ ಆಗಿದೆ. ಆ ಕಾರಣಕ್ಕಾಗಿ ಯಡಿಯೂರಪ್ಪನವರಿಗೂ ಕರಾವಳಿಗೂ ಅವಿನಾಭಾವ ಸಂಬಂಧ. ಸಾವಿರ ಕೋಟಿಗೂ ಮಿಕ್ಕಿ ಅನುದಾನ ನೀಡಿರುವುದು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಮೇಲೆ ಅವರಿಗಿರುವ ಪ್ರೀತಿಯನ್ನು ತೋರಿಸುತ್ತದೆ ಎಂದರು.
ಮಾತು ಸಾಧನೆಯಾಗ ಬಾರದು, ಸಾಧನೆ ಮಾತಾಗಬೇಕು, ರಾಜೇಶ್ ನಾಯ್ಕ್ ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದು, ಮತದಾರರ ವಿಶ್ವಾಸ ಪಡೆದು ಶಾಸಕರಾಗಿ, ಗಲಭೆ ಪೀಡಿತ ಬಂಟ್ವಾಳವನ್ನು ಶಾಂತಿಯ ಊರಾಗಿ ಪರಿವರ್ತಿಸಿರುವುದು ಅಭಿನಂದನೀಯ ಎಂದರು.
ನೀರಿನಿಂದ ಹೊರ ಬಿದ್ದ ಮೀನಿನಂತೆ ವಿಲವಿಲ ಒದ್ದಾಡುತ್ತಿರುವ ಕಾಂಗ್ರೆಸ್ ಪ್ರಜಾಧ್ವನಿ ಎನ್ನುವ ನಾಟಕವಾಡುತ್ತಿದೆ. ರಾಜ್ಯದ ಜನರ ವಿಶ್ವಾಸ ಗೆಲ್ಲುವ ಪ್ರಯತ್ನದಲ್ಲಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲುತ್ತದೆ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ, ಆದರೆ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳಿದರೆ ಸಹಿಸೋದಿಲ್ಲ, ಭಾರತದಲ್ಲಿ ತ್ರಿವಳಿ ತಲಾಖ್ ನಿಂದ ಅಲ್ಪಸಂಖ್ಯಾತ ಹೆಣ್ಣುಮಕ್ಕಳನ್ನು ರಕ್ಷಿಸಿ ಸ್ವಾಭಿಮಾನಿಯಾಗಿ ಬದಕುವ ಅವಕಾಶವನ್ನು ಬಿಜೆಪಿ ಮಾಡಿದೆ ಎಂದರು. ದೇಶದಲ್ಲಿ ಎಲ್ಲಾ ಧರ್ಮದವರು ಒಟ್ಟಾಗಿ ಸಾಗುತ್ತಿದ್ದರೆ ಅದಕ್ಕೆ ಬಿಜೆಪಿ ಕಾರಣ ಎಂದು ತಿಳಿಸಿದರು.
ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ಚುನಾವಣೆಯಲ್ಲಿ ಸೋತ ಬಳಿಕವೂ ನಿರಂತರವಾಗಿ ಜನರ ಜೊತೆ ಇದ್ದ ಕಾರಣ ಆ ಬಳಿಕದ ಚುನಾವಣೆಯಲ್ಲಿ ಅತ್ಯಧಿಕ ಮತದ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಯಿತು. ಕಳೆದ ನಾಲ್ಕೂವರೆ ವರ್ಷದಲ್ಲಿ ಯಾವುದೇ ಗಲಭೆಯಿಲ್ಲದೆ ಜನರು ನೆಮ್ಮದಿಯ ಜೀವನ ನಡೆಸುತ್ತಿರುವುದು ನನಗೆ ಆತ್ಮ ತೃಪ್ತಿ ನೀಡಿದೆ ಎಂದರು.
ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕಾಸರಗೋಡು ಜಿಲ್ಲೆಯ ಬಿಜೆಪಿ ಅಧ್ಯಕ್ಷ ರವೀಶ್ ತಂತ್ರಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ಕ.ನ.ನೀ.ಸ. ಮತ್ತು ಒ.ಚ. ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ. ಭಟ್, ಗ್ರಾಮ ವಿಕಾಸ ಯಾತ್ರೆಯ ಸಹ ಸಂಚಾಲಕರಾದ ಮಾಧವ ಮಾವೆ, ಸುದರ್ಶನ ಬಜ, ಮಾಧ್ಯಮ ಪ್ರಮುಖ್ ಸಂದೇಶ್ ಶೆಟ್ಟಿ ಅರೆಬೆಟ್ಟು,
ಮಂಡಲ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಪಂಜಿಕಲ್ಲು ಗ್ರಾ.ಪಂ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ರಾಯಿ ಗ್ರಾ.ಪಂ. ಅಧ್ಯಕ್ಷೆ ರತ್ನಾ ಆನಂದ ಉಪಸ್ಥಿತರಿದ್ದರು.
ಮಂಡಲ ಕಾರ್ಯದರ್ಶಿ ರಮಾನಾಥ ರಾಯಿ ಸ್ವಾಗತಿಸಿದರು, ಗ್ರಾಮ ವಿಕಾಸ ಯಾತ್ರೆಯ ಸಂಚಾಲಕ ದೇವದಾಸ್ ಶೆಟ್ಟಿ ಶಾಸಕರ ಅಭಿವೃದ್ಧಿ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ವಸಂತ ಅಣ್ಣಳಿಕೆ ವೈಯಕ್ತಿಕ ಗೀತೆ ಹಾಡಿದರು.
ಮಂಡಲ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರೂಪಿಸಿ, ರಾಯಿ ಗ್ರಾ.ಪಂ. ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ವಂದಿಸಿದರು.