ಬಂಟ್ವಾಳ: ಅಷ್ಠಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರಕ್ಕೆ ದೇವಾಡಿಗ ಸಮಾಜ ಶ್ರೀ ನಂದಾವರ ದೇವಸ್ಥಾನ ರಥ ಸಮರ್ಪಣಾ ಸಮಿತಿ ವತಿಯಿಂದ ಶ್ರೀದೇವರಿಗೆ ಫೆ.3 ರಂದು ಶ್ರೀ ರಥ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ ತಿಳಿಸಿದರು.
ಸೋಮವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ನಂದಾವರ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದ ಅಷ್ಠಬಂಧ ಬ್ರಹ್ಮಕಲಶವು ನಡೆಯಲಿದ್ದು, ಮಧ್ಯಾಹ್ನ 12.30 ರ ಶುಭ ಮುಹೂರ್ತ ದಲ್ಲಿ ನೂತನ ಶ್ರೀರಥಕ್ಕೆ ಕಲಶಾಭಿಷೇಕ ಮತ್ತು ಶ್ರೀದೇವರಿಗೆ ರಥ ಸಮರ್ಪಣೆ, ರಾತ್ರಿ ರಥೋತ್ಸವವು ನಡೆಯಲಿದೆ ಎಂದರು.
ಪೊಳಲಿಗೆ ಸಮರ್ಪಣೆಗೈದ ರಥ ನಿರ್ಮಾಣದ ಶಿಲ್ಪಿಯವರು ನಂದಾವರಕ್ಕೆ ಸಮರ್ಪಿಸುವ ಶ್ರೀರಥ ನಿರ್ಮಿಸುತ್ತಿದ್ದು, ಈಗಾಗಲೇ ಶೇ.90ರಷ್ಟು ಕೆಲಸ ಮುಗಿದಿದೆ. ರಥದ ನಿರ್ಮಾಣದಲ್ಲಿ ಕೇವಲ ದೇವಾಡಿಗ ಮಾತ್ರವಲ್ಲ ಸಮಸ್ತ ಹಿಂದೂ ಸಮಾಜದಿಂದ ಉತ್ತಮವಾದ ಸ್ಪಂದನೆ ಸಿಕ್ಕಿದ್ದು, ಸುಮಾರು 25 ಲಕ್ಷ ರೂ.ವೆಚ್ಚದಲ್ಲಿ ನೂತನ ಶ್ರೀರಥವನ್ನು ನಿರ್ಮಿಲಾಗಿದೆ ಎಂದರು.
ದೇವಾಡಿಗ ಸಮಾಜದ ನೇತೃತ್ವದಲ್ಲಿ ರಥ ಸಮರ್ಪಿಸಲಾಗುತ್ತಿದೆಯಾದರೂ ಸಮಸ್ತ ಹಿಂದೂ ಸಮಾಜ ಒಟ್ಟಾಗಿ ವಿರಾಟ್ ರೂಪ ದರ್ಶನದ ಮೂಲಕ ರಥ ಸಮರ್ಪಿಸಲಾಗುತ್ತಿದೆ ಎಂದರು.
ಜ.28 ರಂದು ಪೊಳಲಿಯಿಂದ ರಥವನ್ನು ತಂದು ಪಾಣೆಮಂಗಳೂರಿನ ಶ್ರೀ ವೀರವಿಠಲ ದೇವಸ್ಥಾನದಲ್ಲಿ ಇರಿಸಲಾಗುವುದು, ಜ.29 ರಂದು ದೇವಾಡಿಗ ಸಮಾಜದ ಹೊರೆಕಾಣಿಕೆಯ ಜತೆಗೆ ರಥವನ್ನು ಮಾರ್ನಬೈಲ್ ಶ್ರೀಕ್ಷೇತ್ರ ನಂದಾವರದ ದ್ವಾರದ ಬಳಿಯಿಂದ ಕ್ಷೇತ್ರಕ್ಕೆ ವೈಭವಪೂರ್ಣವಾದ ಮೆರವಣಿಗೆಯಲ್ಲಿ ತರಲಾಗುವುದು, ಜ.30 ರಂದು ರಥದ ಭೂಸ್ಪರ್ಶ ಸಹಿತ ವಿವಿಧ ವೈಧಿಕ ವಿಧಿವಿಧಾನಗಳು ನಡೆಯಲಿದೆ ಎಂದರು.
ರಥದ ಸಮರ್ಪಣೆಯ ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ ,ಬಾರ್ಕೂರು ಏಕನಾಥೇಶ್ವರೀ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್ ಸಹಿತ ಹಲವಾರು ಪ್ರಮುಖರು ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಡಾ.ಸುಂದರ ಮೊಯಿಲಿ, ಪ್ರ.ಕಾರ್ಯದರ್ಶಿ ಸದಾಶಿವ ಮೊಯಿಲಿ ಬೆಂಜನಪದವು,ಗೌರವ ಸಲಹೆಗಾರ ಪದ್ಮನಾಭ ದೇವಾಡಿಗ ಬಂಟ್ವಾಳ,ಉಪಾಧ್ಯಕ್ಷ ನಾಗೇಶ್ ದೇವಾಡಿಗ,ಕಾರ್ಯದರ್ಶಿ ಪ್ರಮೀಳಾ ದೇವಾಡಿಗ ಸಜೀಪ ಅವರು ಉಪಸ್ಥಿತರಿದ್ದರು.