ಬಂಟ್ವಾಳ: ಇತ್ತೀಚೆಗೆ ಜಾರಿಯಾಗುವ ಕಾನೂನುಗಳು ಹಾಗೂ ತಿದ್ದುಪಡಿಗಳು ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುವಂತಿದೆ. ಮಾನವನ ಬದುಕನ್ನು ಸಹನೀಯ ಮಾಡಲು, ದೇಶದ ಸಂಪತ್ತು ಎಲ್ಲರಿಗೂ ತಲುಪಲು ರಚನೆಯಾಗಿದ್ದ ಸಂವಿಧಾನದ ದಿಕ್ಕನ್ನು ಬದಲಿಸುವ ಪ್ರಯತ್ನ ನಡೆಯುತ್ತಿದೆ. ಜನರು ನೀಡುವ ಮತದ ಮೌಲ್ಯವನ್ನು ದುಡ್ಡು, ಜಾತಿಯಿಂದ ಅಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮೂಲಕ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ಹೊಸತು ಮಾಸ ಪತ್ರಿಕೆಯ ಸಂಪಾದಕ ಡಾ. ಸಿದ್ದನಗೌಡ ಪಾಟೀಲ್ ಹೇಳಿದರು.
ಮಾನವ ಬಂಧುತ್ವ ವೇದಿಕೆ ಬಂಟ್ವಾಳ ತಾಲೂಕು ಸಂಚಲನ ಸಮಿತಿ ಹಾಗೂ ಸ್ವಾಗತ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆದ ಸಂವಿಧಾನ ಅರಿವಿನ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಮೊದಲಿನ ದಾಳಿ ಮತದ ಮೌಲ್ಯದ ಮೇಲೆ ಆಗಿದೆ. ದೇಶವನ್ನು ಕಾರ್ಪೊರೇಟ್ ಕಂಪೆನಿಗಳಿಗೆ ನೀಡಲಾಗಿದೆ. ಮತ ಹಾಕಿದ ಪ್ರಜೆಗೆ ಬೆಲೆಯೇರಿಕೆಯ ಬಿಸಿ ನೀಡಿ ಅದಾನಿ ಅಂಬಾನಿಯಂತಹ ಉದ್ಯಮಿಗಳಿಗೆ ತೆರಿಗೆ ರಿಯಾಯಿತಿ ನೀಡಿ ಅವರು ಜಗತ್ತಿನ ಶ್ರೀಮಂತರಾಗುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೆಲ್ಲವೂ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ ಎಂದು ಆರೋಪಿಸಿದರು.
ಸಂವಿಧಾನ ಅಪಾಯದದಲ್ಲಿದ್ದು ಅದನ್ನು ಉಳಿಸುವ ಬಗ್ಗೆ ಎಲ್ಲ ಕಡೆಯೂ ಹೋರಾಟದ ಧ್ವನಿ ಕೇಳಿ ಬರುತ್ತಿದೆ ಎಂದ ಅವರು ಬಿಜೆಪಿ ರಾಜಕೀಯ ಪಕ್ಷ ಅಲ್ಲ. ಅದು ಆರ್ಎಸ್ಎಸ್ನ ಆಯುಧ. ಅದರ ಯೋಜನೆಗಳು ಪ್ರಜೆಗಳಿಂದ ನಿರ್ಧಾರ ಆಗುತ್ತಿಲ್ಲ, ಆರ್ಎಸ್ಎಸ್ ನಿರ್ದೇಶನದಂತೆ ನಡೆಯುತ್ತದೆ, ಬಿಜೆಪಿಗೆ ಮತ ಹಾಕಿದರೆ ಮೋದಿ ಗೆಲ್ಲುವುದಲ್ಲ, ಆರ್ಎಸ್ಎಸ್ ಗೆಲ್ಲುತ್ತದೆ ಎಂದು ಕಿಡಿಕಾರಿದರು. ಸಂವಿಧಾನದ ಅರಿವಿನ ಹಬ್ಬದ ಸಂದೇಶವನ್ನು ಜನರಿಗೆ ತಿಳಿಸಬೇಕು. ಮತೀಯರನ್ನು ಮತಾಂದರರಿಂದ ದೂರ ಇಡುವುದು ಮಾನವ ಬಂಧುತ್ವ ವೇದಿಕೆಯ ಕೆಲಸ ಎಂದರು.
ಸಾಹಿತಿ ಕೆ.ಆರ್ ವಿದ್ಯಾಧರ್ ಅಧ್ಯಕ್ಷತೆ ವಹಿಸಿದ್ದರು. ವಿಭಾಗೀಯ ಸಂಚಾಲಕ ಕೆ.ಎಸ್. ಸತೀಶ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿ ಸಂವಿಧಾನವನ್ನು ನಾಶಮಾಡಲು ಪ್ರಯತ್ನ ನಡೆಯುತ್ತಿದೆ, ನಾವು ಭಿನ್ನಾಭಿಪ್ರಾಯ ಮರೆತು ಒಟ್ಟಾಗದಿದ್ದರೆ ಸಂವಿಧಾನ ನಾಶವಾಗಲಿದೆ ಎಂದರು. ಶಿಕ್ಷಣ ತಜ್ಞ ಶ್ರೀಪಾದ ಭಟ್, ದಿನೇಶ್ ಹೆಗ್ಡೆ ಉಳೆಪ್ಪಾಡಿ, ಮಾನವ ಬಂಧುತ್ವ ವೇದಿಕೆಯ ವೇದಿಕೆಯ ಸಂಚಾಲಕ ಕೇಶವ ಪೂಜಾರಿ ಉಪಸ್ಥಿತರಿದ್ದರು. ಮಾನವ ಬಂಧುತ್ವ ವೇದಿಕೆಯ ಕೋಶಾಧಿಕಾರಿ ಬಿ.ಶೇಖರ್ ಸ್ವಾಗತಿಸಿದರು. ಸುರೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ವಿಚಾರಗೋಷ್ಠಿಗಳು ನಡೆಯಿತು.