
ಮಂಗಳೂರು: ಇಲ್ಲಿನ ಜಿಲ್ಲಾ ಪಂಚಾಯತಿನ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಬಿಎಸ್ಎಫ್ ಡೆಪ್ಯುಟಿ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸ, ಜಿ.ಪಂ ಉಪ ಕಾರ್ಯದರ್ಶಿ ಜಯಲಕ್ಷ್ಮೀ ರಾಯ್ ಕೋಡ್, ಸೈಬರ್ ಅಪರಾಧ ಠಾಣೆಯ ಡಿವೈಎಸ್ಪಿ ಮಂಜುನಾಥ್, ವೆನ್ ಲಾಕ್ ಆಸ್ಪತ್ರೆಯ ಮೆಡಿಕಲ್ ಆಪೀಸರ್ ಡಾ. ಮನೀಷ್, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಪಿ.ಓ. ರೋಡ್ರಿಗಸ್, ವಿಕಲ ಚೇತನ ಕಲ್ಯಾಣಾಧಿಕಾರಿ ಮನಿಷ್ ನಾಯಕ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


ಡಿ. ಚಂದಪ್ಪ ಮೂಲ್ಯ ಅವರು ದೇಶದ ಭದ್ರತಾ ಸೇವೆಯಲ್ಲಿ 36 ವರ್ಷಗಳ ಕಾಲ ಸುದೀರ್ಘ ಹಾಗೂ ಗಣನೀಯ ಸೇವೆ ಸಲ್ಲಿಸಿದ್ದು ವೃತ್ತಿ ಕ್ಷೇತ್ರದ ಸಾಧನೆಗಾಗಿ ರಾಷ್ಟ್ರಪತಿ ಪುರಸ್ಕಾರ ಪಡೆದಿದ್ದಾರೆ. ನಿವೃತ್ತಿಯ ಬಳಿಕವೂ ಹಲವಾರು ಸಮಾಜಮುಖಿ ಹಾಗೂ ಜನಪರ ಕಾಳಜಿಯೊಂದಿಗೆ ಸೇವೆ ಸಲ್ಲಿಸುತ್ತಿರುವುದು ಗಮನಾರ್ಹ ಸಾಧನೆಯಾಗಿದೆ. ಇವರ ಈ ಎಲ್ಲಾ ಸೇವಾ ಕಾರ್ಯವನ್ನು ಮನಗೊಂಡು ವಿವಿಧ ಕ್ಷೇತ್ರಗಳ ಐದು ಮಂದಿ ಸಾಧಕರೊಂದಿಗೆ ಇವರ ದೇಶ ಸೇವೆ ಹಾಗೂ ಸಮಾಜಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ದ.ಕ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
Advertisement







