
ಬಂಟ್ವಾಳ: ಪ್ರತೀ ತಿಂಗಳು ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರ ನೀಡುವ ಸರಕಾರ ಮಾಡಬೇಕಾದ ಕಾರ್ಯವನ್ನು ಖಾಸಗಿ ಸಂಸ್ಥೆಯಾದ ಸೇವಾಂಜಲಿ ಪ್ರತಿಷ್ಠಾನ ಅತ್ಯಂತ ಮುತುವರ್ಜಿ ವಹಿಸಿ ಮಾಡುತ್ತಿರುವುದು ಅಭಿನಂದನೀಯ ಎಂದು ಬಂಟ್ವಾಳ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್ ಹೇಳಿದರು.
ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಕ್ಷಯ ರೋಗಿಗಳಿಗೆ ಆಹಾರ, ದವಸಧಾನ್ಯ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವ ಸೇವಾಂಜಲಿ ಪ್ರತಿಷ್ಠಾನ ಪ್ರಧಾನಿಯವರ ಕ್ಷಯ ಮುಕ್ತ ಭಾರತ ಅಭಿಯಾನಕ್ಕೆ ಅಳಿಲ ಸೇವೆಯನ್ನು ನೀಡುತ್ತಿದೆ. ಕ್ಷಯ ರೋಗಿಗಳು ಔಷಧಿಯ ಜೊತೆಗೆ ಪೌಷ್ಟಿಕಾಂಶದ ಆಹಾರವನ್ನು ಸೇವಿಸಿ ಕ್ಷಯ ಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸುವಂತೆ ವಿನಂತಿಸಿದರು.

ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೇತನ್ ಆರೋಗ್ಯ ಮಾಹಿತಿ ನೀಡಿ ಕೆಮ್ಮು ಮೊದಲಾದ ಕ್ಷಯ ರೋಗದ ಲಕ್ಷಣಗಳು ಕಂಡು ಬಂದಾಗ ಸಕಾಲದಲ್ಲಿ ವೈದ್ಯರಿಂದ ತಪಸಣೆ ನಡೆಸಿ ಔಷಧೋಪಾಚಾರ ಮಾಡಿದಾಗ ರೋಗ ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದರು.
ಉದ್ಯಮಿ ಭುವನೇಶ್ ಪಚ್ಚಿನಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.


ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷಯ ಮುಕ್ತ ಭಾರತ ನಿರ್ಮಾಣ ಮಾಡುವ ಪ್ರಧಾನಿಯವರ ಆಶಯಕ್ಕೆ ಪೂರಕವಾಗಿ ಸೇವಾಂಜಲಿ ಪ್ರತಿಷ್ಠಾನ 45 ತಿಂಗಳಿನಿಂದ ನಿರಂತರವಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಈವರೆಗೆ 230 ಮಂದಿಗೆ ಒಟ್ಟು 15 ಲಕ್ಷ ರೂ. ಖರ್ಚು ಮಾಡಿದೆ ಎಂದರು.
ಸೇವಾಂಜಲಿಯ ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು.ಪ್ರಮುಖರಾದ ಪ್ರಶಾಂತ್ ತುಂಬೆ, ನಾರಾಯಣ ಬಡ್ಡೂರು, ಸುರೇಶ್ ರೈ ಪೆಲಪಾಡಿ, ಶಿವರಾಜ್ ಸುಜೀರ್, ವಿಕ್ರಂ ಫರಂಗಿಪೇಟೆ, ಸುನೀಲ್ ಕುಮ್ಡಕಟ್ಟೆ ಹರೀಶ್ ಕಡೆಗೋಳಿ ಪ್ರಭಾಕರ ರಾಮಲ್ ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

Advertisement







