
ಬಂಟ್ವಾಳ: ಈ ವರ್ಷ ಬೇಸಿಗೆ ಅವಧಿ ಹೆಚ್ಚಾಗಿ, ಮಳೆ ತಡವಾಗುವ ಸಾಧ್ಯತೆಯಿರುವುದರಿಂದ ಜೂನ್ ತಿಂಗಳವರೆಗೆ ನೀರಿನ ಲಭ್ಯತೆಯನ್ನು ಕಾಯ್ದಿರಿಸುವುದು ಅತೀ ಮುಖ್ಯವಾಗಿದೆ. ಮುಂದಿನ ೪ ತಿಂಗಳವರೆಗೆ ನೀರಿನ ಶೇಖರಣೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಮಂಗಳೂರು ನಗರಕ್ಕೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು ಅತೀ ಅವಶ್ಯಕ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡುವುದರ ಜೊತೆಗೆ ಮತ್ತೊಮ್ಮೆ ಸಭೆ ನಡೆಸಿ ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಅವರು ತುಂಬೆ ವೆಂಟೆಡ್ ಡ್ಯಾಂನಲ್ಲಿ ಬುಧವಾರ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿ, ಬಳಿಕ ಗಂಗಾಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಸ್ತುತ ತುಂಬೆ ವೆಂಟೆಡ್ ಡ್ಯಾಂ ಮತ್ತು ಎಎಂಆರ್ ಡ್ಯಾಂನಲ್ಲಿ ಸಾಕಷ್ಟು ನೀರಿನ ಸಂಗ್ರಹಣೆಯಿದೆ. ಈ ವರ್ಷ ನೀರಿನ ಹಾಹಾಕಾರ ಬಾರದಿರಲಿ ಎಂದು ಗಂಗಾದೇವಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಗಿದೆ ಎಂದು ಅವರು ತಿಳಿಸಿದರು.


ಈ ಸಂದರ್ಭ ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಹರೀಶ್ ಕುಮಾರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಾಜಿ ಸಚಿವ ಬಿ.ರಮಾನಾಥ ರೈ, ಮನಪ್ತಾಯುಕ್ತ ರವಿಚಂದ್ರ ನಾಯ್ಕ್, ಉಪ ಆಯುಕ್ತ ನರೇಶ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಮನಪಾ ಮಾಜಿ ಸದಸ್ಯರಾದ ಪ್ರವೀಣ್ ಚಂದ್ರ, ಅನಿಲ್ ಕುಮಾರ್, ವಿನಯ್ ರಾಜ್, ಸಹಾಯಕ ಎಂಜಿನಿಯರ್ ಅಶ್ವಿನ್ ಎಸ್. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುನೀತ್ ಭಾಗವಹಿಸಿದ್ದರು.
Advertisement







