
ಬಂಟ್ವಾಳ: ಒಗ್ಗಟ್ಟು ನಮ್ಮೆಲ್ಲರ ಶಕ್ತಿ. ಸಾಮರಸ್ಯದ ಮೂಲಕ ಜೀವನ ಹಾಗೂ ಸಮಾಜವನ್ನು ಮುನ್ನಡೆಸುವ ಜವಬ್ದಾರಿ ನಮ್ಮೆಲ್ಲರದ್ದಾಗಬೇಕು. ಭಿನ್ನಾಭಿಪ್ರಾಯವನ್ನು ಸಕರಾತ್ಮಕವಾಗಿ ಸ್ವೀಕರಿಸಿಕೊಂಡು ನಾವೆಲ್ಲರೂ ಭಾರತೀಯರು ಎಂಬ ಭಾವನೆಯೊಂದಿಗೆ ಭವಿಷ್ಯದ ಸಮಾಜಕ್ಕೆ ಪ್ರತಿಯೊಬ್ಬರು ಕಟಿ ಬದ್ಧರಾಗಬೇಕು
ಎಂದು ರಾಜ್ಯ ವಿಧಾನಸಭಾದ್ಯಕ್ಷ ಡಾ. ಯು.ಟಿ.ಖಾದರ್ ಹೇಳಿದರು.
ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ಕೇಂದ್ರ ಕಚೇರಿಯ ನೂತನ ಕಟ್ಟಡಕ್ಕೆ ಸಜೀಪಮೂಡ ಗ್ರಾಮದ ಸುಭಾಷ್ ನಗರದಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು.
ಕುಲ ಕಸುಬುದಾರರಿಗೆ ಸ್ವಾಭಿಮಾನ ನೀಡಬೇಕೆನ್ನುವ ಉದ್ದೇಶ ಈ ಸಹಕಾರಿ ಸಂಘದ ಮೂಲಕ ಈಡೇರಿದೆ. ಪ್ರಸ್ತುತ ಸರ್ವರಿಗೂ ಸೇವೆ ನೀಡುವ ಸಹಕಾರಿ ಸಂಘವಾಗಿ ಪರಿವರ್ತನೆಯಾಗಿದೆ ಎಂದು ತಿಳಿಸಿದರು.
ಸಹಕಾರಿ ಕ್ಷೇತ್ರ ದೊಡ್ಡ ಮಟ್ಟದ ಕೊಡುಗೆಯನ್ನು ದೇಶಕ್ಕೆ ನೀಡುತ್ತಿದೆ. ಸಹಕಾರ ಸಂಘಗಳು ಜನರ ವಿಶ್ವಸಾದೊಂದಿಗೆ ವ್ಯವಹಾರ ಮಾಡುತ್ತಿದೆ. ಇಲ್ಲಿನ ಸಮುದಾಯ ಭವನ ನಿರ್ಮಾಣಕ್ಕೆ ನಿಯಮಕ್ಕೆ ಅನುಗುಣವಾಗಿ ಅನುದಾನವನ್ನು ಸರಕಾರದಿಂದ ಒದಗಿಸಿಕೊಡುವುದಾಗಿ ಅವರು ಭರವಸೆ ನೀಡಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಕೇಂದ್ರ ಕಚೇರಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ
ಮೂರ್ತೆದಾರರ ಅಭಿವೃದ್ಧಿಗಾಗಿ ಸ್ವಂತವಾದ ಸಹಕಾರಿ ಸಂಘ ಸ್ಥಾಪಿಸಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ವಂತ
ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಮೆಚ್ಚುವ ಕಾರ್ಯ ಎಂದು ಅಭಿನಂದಿಸಿದರು. ಸಂಜೀವ ಪೂಜಾರಿಯವರು ನಾರಾಯಣ ಗುರುಗಳ ಆಶಯಕ್ಕೆ ಪೂರಕವಾಗಿ ಈ ಸಂಘದ ಮೂಲಕ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಎಂದ ಅವರು ಹಿಂದುಳಿದ ವರ್ಗದವರು ಮುಂದುವರಿಯಲು ಇತಿಹಾಸವನ್ನು ತಿಳಿಯಬೇಕು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮುಂದಿನ ದಿನಗಳಲ್ಲಿ
ಶಿರ್ತಾಡಿಯಲ್ಲಿ ಹೊಸ ಶಾಖೆ ಆರಂಭವಾಗಲಿದ್ದು ಮುಂದಿನ ವರ್ಷ ಪ್ರಧಾನ ಕಚೇರಿಯ ಕಟ್ಟಡ ಉದ್ಘಾಟನೆಯಾಗಬೇಕು ಎನ್ನುವ ಸಂಕಲ್ಪ ಇದೆ. ಆರಂಭದಿಂದಲೂ ಶೇ.೨೫ ಡಿವಿಡೆಂಡ್ ನೀಡಿದ ಸಹಕಾರಿ ಸಂಘ ಹಾಗೂ ಒಂದು ಕೋಟಿಗೂ ಮಿಗಿಲು ಸಾಲ ನೀಡುವ ಸಹಕಾರಿ ಸಂಘ ನಮ್ಮದು ಎಂದು ತಿಳಿಸಿದರು.


ಮುಖ್ಯ ಅತಿಥಿಗಳಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಮಾಜಿ ಶಾಸಕ ರುಕ್ಮಯ ಪೂಜಾರಿ ಏಳ್ತಿಮಾರ್, ಬೂಡ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಸಜೀಪಮೂಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಶೆಟ್ಟಿ, ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕಾಂತಾಡಿಗುತ್ತು, ಸಜೀಪನಡು ಶ್ರೀ ನಾಲ್ಕೈತ್ತಾಯ ದೈವಸ್ಥಾನದ ದೈವಪಾತ್ರಿ ಶಂಕರ ಯಾನೆ ಕೋಚ ಪೂಜಾರಿ, ಅಮ್ಮೆಂಬಳ ಸಂತ ಥೋಮಸರ ಚರ್ಚಿನ ಧರ್ಮಗುರುಗಳಾದ ವಂ.ಫಾ. ಮೈಕಲ್ ಡಿಸಿಲ್ವಾ, ಕೊಳಕೆ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಎಸ್. ಸಿದ್ದೀಕ್, ಸಜೀಪಮೂಡ ಬ್ರಹ್ಮಶ್ರೀ ನಾರಾಯಣ ಜ್ಞಾನಮಂದಿರದ ಅಧ್ಯಕ್ಷ ಕೆ. ಮೋಹನ್ದಾಸ್ ಪೂಜಾರಿ, ಪದ್ಮವತಿ ಶೆಟ್ಟಿ ಸಂಘದ ಉಪಾಧ್ಯಕ್ಷ ವಿಠಲ ಪೂಜಾರಿ, ನಿರ್ದೇಶಕ, ಸುಂದರ ಪೂಜಾರಿ ಬೀಡಿನಪಾಲು ಉಪಸ್ಥಿತರಿದ್ದರು.
ನಿರ್ದೇಶಕರಾದ ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ್ ಅನ್ನಪ್ಪಾಡಿ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಜಯಶಂಕರ್ ಕಾನ್ಸಾಲೆ, ಕೆ. ಸುಜಾತ ಎಂ., ವಾಣಿ ವಸಂತ್, ಆಶಿಶ್ ಪೂಜಾರಿ, ಚಿದಾನಂದ ಎಂ. ಕಡೇಶ್ವಾಲ್ಯ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಮತಾ ಜಿ. ಚೇಳೂರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
Advertisement







