
ಬಂಟ್ವಾಳ: ರಾಮ ಎನ್ನುವ ಹೆಸರಿನಲ್ಲಿಯೇ ಪ್ರೇಮವಿದೆ. ರಾಮ ಎನ್ನುವುದು ಸುಲಲಿತವಾಗಿ ಬರುವ ನಾಮ. ನಮ್ಮ ಬದುಕಿನ ದಾರಿಗೆ ರಾಮಯಾಣವೇ ಬೆಳಕು. ಜೀವನವೆನ್ನುವ ನಾಟಕ ರಂಗಕ್ಕೆ ಶ್ರೀರಾಮ, ಶ್ರೀಕೃಷ್ಣರೇ ಸೂತ್ರದಾರರು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರದ 54ನೇ ವಾರ್ಷಿಕ ಏಕಾಹ ಭಜನಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮಾನವೀಯ ಮೌಲ್ಯಗಳನ್ನು ಬಿತ್ತಿದಾಗ ಸುಂದರ ಸಮಾಜ ನಿರ್ಮಾಣವಾಗಲಿದೆ. ಭಾರತದ ಆಂತರ್ಯ ಆಧ್ಯಾತ್ಮಿಕತೆಯಿಂದ ಕೂಡಿದೆ ಎಂದು ತಿಳಿಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಭಜನೆಯ ಮೂಲಕ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿದೆ. ಆ ಕಾರಣಕ್ಕಾಗಿ ಶ್ರೀರಾಮನ ಹೆಸರಿನ ಭಜನಾ ಮಂದಿರಗಳು ಅಲ್ಲಲ್ಲಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಬಂಟ್ವಾಳ ಘಟಕ ಯಕ್ಷಧ್ರುವ ಪಟ್ಲ ಫೌಂಡೇಷನ್ನ ಅಧ್ಯಕ್ಷ ದಿವಾಕರ ಶೆಟ್ಟಿ ಪರಾರಿಗುತ್ತು ಮಾತನಾಡಿ ಮಂದಿರದ ಕೆಲಸಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.

ಅಡ್ಕ ಭಗವತಿ ಕ್ಷೇತ್ರದ ಶ್ರೀ ಕೃಷ್ಣ ಕಾರ್ನವರ್ ಅವರನ್ನು ಗೌರವಿಸಲಾಯಿತು. ಮುಖ್ಯಮಂತ್ರಿ ಬಂಗಾರದ ಪದಕ ವಿಜೇತ ಪೊಲೀಸ್ ಸುಧೀರ್ ಕುಮಾರ್ ಜಾರಂದಗುಡ್ಡೆ, ರಾಜ್ಯಮಟ್ಟದ ಮಾಜಿ ಕುಸ್ತಿ ಪಟು ಚಂದ್ರಹಾಸ ಕಡೆಗೋಳಿ, ಎಸ್ಎಸ್ಎಲ್ಸಿಯಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಾದ ರಿಧಿ ದರಿಬಾಗಿಲು, ದಕ್ಷಿಣ್, ಶ್ರೀ ಮೂಕಾಂಬಿಕಾ ಮಾತೃ ಮಂಡಳಿಯ ಅಧ್ಯಕ್ಷೆ ಪ್ರಿಯಾದರ್ಶಿನಿ ಸುನಿಲ್ ದರಿಬಾಗಿಲು ಅವರನ್ನು ಅಭಿನಂದಿಸಲಾಯಿತು. ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಗರ ಭಜನೆಗೆ ಸಹಕರಿಸಿದವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ದಿನಕರ ಬಂಜನ್ ಬರೆಬೀಡು, ಉತ್ಸವ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಮಾಡಂಗೆ ಉಪಸ್ಥಿತರಿದ್ದರು.
ಆಡಳಿತ ಸಮಿತಿ ಅಧ್ಯಕ್ಷ ಶಶಿಧರ ಬ್ರಹ್ಮರಕೂಟ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಮದ್ವಿನ್ ಪೆರಿಯೋಡಿ ಬೀಡು ಸ್ವಾಗತಿಸಿದರು. ಉದಯ್ ಕುಮಾರ್ ಜ್ಯೋತಿಗುಡ್ಡೆ ಹಾಗೂ ನವೀನ್ ಬಂಗೇರ ಪಲ್ಲ ಸನ್ಮಾನ ಪತ್ರ ವಾಚಿಸಿದರು. ಸಂತೋಷ್ ದರಿಬಾಗಿಲು ವಂದಿಸಿದರು.
ಜಗದೀಶ್ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ವಚನ್ ಶೆಟ್ಟಿ ಭೇಟಿ ನೀಡಿದರು.

Advertisement







