
ಬಂಟ್ವಾಳ: ಮೆಲ್ಕಾರ್ ಫ್ಲೈ ಓವರ್ನ ಮೇಲೆ ಕಾರೊಂದು ರಸ್ತೆ ವಿಭಾಜಕ್ಕಕೆ ಡಿಕ್ಕಿಯಾಗಿ ಉರುಳಿ ಬಿದ್ದು ಯುವಕ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೃತರನ್ನು ಕಡಬ ತಾಲೂಕಿನ ಕುದ್ಮಾರು ಗ್ರಾಮದ ನೂಜೋಲ್ತಡ್ಕ ನಿವಾಸಿ ಕರುಣಾಕರ ಗೌಡ ಹಾಗೂ ರೇವತಿ ದಂಪತಿ ಪುತ್ರ ಕಾರ್ತಿಕ್ ಗೌಡ (೨೩) ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಮೂರು ಮಂದಿ ಪ್ರಯಾಣಿಸುತ್ತಿದ್ದು ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಫ್ಲೈ ಓವರ್ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಡಿಕ್ಕಿಯಾಗಿದೆ. ಬಳಿಕ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಕಾರ್ತಿಕ್ ಹಾಗೂ ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದರು. ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಕಾರ್ತಿಕ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ತಿಕ್ ಮಂಗಳೂರಿನಲ್ಲಿ ಉದ್ಯೋಗದ ಸಂದರ್ಶನಕ್ಕೆ ತೆರಳಿದ್ದು ಸಂದರ್ಶನ ಮುಗಿಸಿ ಉದ್ಯೋಗಕ್ಕೆ ಆಯ್ಕೆಯಾಗಿ ಸ್ನೇಹಿತರ ಜೊತೆ ವಾಪಾಸ್ಸು ಬರುತ್ತಿರುವಾಗ ಈ ದುರ್ಘಟನೆ ನಡೆದಿದೆ.


Advertisement







