
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ನಿಯಮಿತ ಬಿ.ಸಿ.ರೋಡ್ ಇದರ ಕೇಂದ್ರ ಕಚೇರಿ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಕೃಷಿ ಕಚೇರಿ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಶುಕ್ರವಾರ ಉದ್ಘಾಟನಾ ಸಮಾರಂಭ ನಡೆಯಿತು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ನೂತನ ಕೇಂದ್ರ ಕಚೇರಿ ಉದ್ಘಾಟಿಸಿದರು. ಅವರು ಮಾತನಾಡಿ, ನಷ್ಟದಲ್ಲಿದ್ದ ಸಂಸ್ಥೆ ಇಂದು 13 ಲಕ್ಷ ರೂ. ಲಾಭಕ್ಕೆ ಬರಲು ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅವರ ಪರಿಶ್ರಮ ಕಾರಣವಾಗಿದ್ದು, ಈ ಸಂಸ್ಥೆ ಸ್ವಂತ ಕಟ್ಟಡವನ್ನು ಹೊಂದಬೇಕಾಗಿದೆ. ಅದಕ್ಕೆ ಸಹಕಾರವನ್ನು ನೀಡುತ್ತೇವೆ, ಕಚೇರಿ ಪೀಠೋಪಕರಣಕ್ಕೆ ಎರಡು ಲಕ್ಷ ರೂ. ಗಳ ಆರ್ಥಿಕ ಸಹಕಾರ ನೀಡುವುದಾಗಿ ತಿಳಿಸಿದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ವಿಶೇಷ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿ ಸಮಾಜದ ಅಭಿವೃದ್ಧಿಗೆ ಮೂರ್ತೆದಾರರ ಕೊಡುಗೆ ಅಪಾರವಾಗಿದ್ದು, ಹಿರಿಯರ ದೂರದೃಷ್ಟಿ ಫಲವಾಗಿ ಮುನ್ನಡೆದಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಿದರೆ, ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿ ಜೊತೆ ಮಾತನಾಡಿ ಸಹಕರಿಸುವುದಾಗಿ ತಿಳಿಸಿದರು. ಸಾಮಾಜಿಕ ಸೌಹಾರ್ದಯುತ ಸಮಾಜ ನಿರ್ಮಾಣವಾಗಲು ಎಲ್ಲರ ಸಹಕಾರ ಬೇಕು, ಎಲ್ಲ ವರ್ಗದ ಜನರು ಭಾವೈಕ್ಯತೆಯಿಂದ ಜೊತೆ ಸಾಗುವುದೇ ನಿಜವಾದ ಅಭಿವೃದ್ಧಿ ಕಾರ್ಯ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭದ್ರತಾ ಕೊಠಡಿ ಉದ್ಘಾಟಿಸಿ ಶುಭ ಹಾರೈಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಮೂರ್ತೆದಾರರ ಹೋರಾಟದಲ್ಲಿ ತಾನೂ ಭಾಗಿಯಾಗಿದ್ದು, ಲೀಟರ್ ಫೀ ಮನ್ನಾ ಮಾಡುವ ಅವಕಾಶ ತಾನು ಅಬಕಾರಿ ಮಂತ್ರಿಯಾಗುವ ವೇಳೆ ದೊರಕಿತ್ತು. ವರ್ತಮಾನದಲ್ಲಿರುವ ನಾವು ಇತಿಹಾಸವನ್ನು ಮರೆಯಬಾರದು. ಸಹಕಾರಿ ಸಂಘಗಳಿಂದ ಉದ್ಯೋಗಾವಕಾಶ ವೃದ್ಧಿಯಾಗುತ್ತದೆ, ಇದರಿಂದ ಸಮಾಜಕ್ಕೆ ಲಾಭವಾಗುತ್ತದೆ ಎಂದರು.
ದ.ಕ.ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಮಹಾಮಂಡಲ ಮುನ್ನಡೆಯಲು ಎಲ್ಲರ ಸಹಕಾರ ದೊರಕಿದೆ.ಸ್ವಂತ ಕಟ್ಟಡವನ್ನು ಹೊಂದುವಂತೆ ಮಾಡಲು ಪ್ರಯತ್ನಿಸಲಾಗುವುದು ಎಂದರು. ನಷ್ಟದಲ್ಲಿದ್ದ ಬ್ಯಾಂಕ್ 30 ಕೋಟಿ ವ್ಯವಹಾರ ನಡೆಸಿ ಉತ್ತಮ ಸ್ಥಿತಿಗೆ ಬಂದಿದೆ, ಪ್ರಸ್ತುತ ಜಿಲ್ಲೆಯಲ್ಲಿ ಬಲಿಷ್ಢ ಸಹಕಾರಿ ಸಂಘವಾಗಿ ಮುನ್ನಡೆಯುತ್ತಿದೆ ಎಂದರು. ಕಾರ್ಯಕ್ರಮದಲ್ಲಿ 12 ಮಂದಿ ಹಿರಿಯ ಮೂರ್ತೆದಾರರನ್ನು ಸನ್ಮಾನಿಸಲಾಯಿತು.
ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಶುಭ ಹಾರೈಸಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಉಡುಪಿ ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಮಾಜಿ ಅಧ್ಯಕ್ಷ ಕೊರಗ ಪೂಜಾರಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಸಂಘದ ಉಪಾಧ್ಯಕ್ಷ ರಾಜೇಶ್ ಸುವರ್ಣ ಉಪಸ್ಥಿತರಿದ್ದರು.
ಇದೇ ವೇಳೆ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ನಿವೇಶನ ಹಾಗೂ ಧನಸಹಾಯ ಒದಗಿಸುವ ಕುರಿತು ಮನವಿ ಸಲ್ಲಿಸಲಾಯಿತು. ನಿರ್ದೇಶಕ ಬೇಬಿ ಕುಂದರ್ ಮನವಿ ಪತ್ರ ವಾಚಿಸಿದರು.

ನಿರ್ದೇಶಕರಾದ ಪುರುಷ ಎನ್. ಸಾಲ್ಯಾನ್, ಅಣ್ಣಿ ಯಾನೆ ನೋಣಯ್ಯ ಪೂಜಾರಿ, ವಿಶ್ವನಾಥ ಪೂಜಾರಿ ಪಂಜ, ವಿಶ್ವನಾಥ ಬಿ, ಶಿವಪ್ಪ ಸುವರ್ಣ, ಪದ್ಮನಾಭ ಕೋಟ್ಯಾನ್, ಹರೀಶ್ ಪೂಜಾರಿ, ಗಣೇಶ್ ಪೂಜಾರಿ, ಉಷಾ ಅಂಚನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಕುಮಾರ್ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಆರ್.ಸಿ.ನಾರಾಯಣ್ ಸ್ವಾಗತಿಸಿದರು. ವಿಜಯ ಕುಮಾರ್ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಜಾ ರಾಜೇಶ್ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.
Advertisement







